ಮಂಗಳೂರು: ತಮಿಳುನಾಡಿನಲ್ಲಿದ್ದ ವೇಳೆ ಗುಂಪೊಂದು ತನ್ನನ್ನು ಸಂಪರ್ಕಿಸಿತ್ತು ಎಂದು ಸಾಕ್ಷಿ-ದೂರುದಾರ ಹೇಳಿಲ್ಲ ಎಂದು ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಸೋಮವಾರ ಸ್ಪಷ್ಟಪಡಿಸಿದ್ದಾರೆ.
2014ರ ನಂತರ ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ನನ್ನನ್ನು ಕೇಳಿತ್ತು. ನಾನು ಕಾನೂನು ಪ್ರಕಾರವೇ ಶವಗಳನ್ನು ಹೂತಿರುವುದಾಗಿ ಹೇಳಿದ್ದೇ. ಆದರೆ ಈ ಗುಂಪು ತಪ್ಪು ಹೇಳಿಕೆ ನೀಡುವಂತೆ ಒತ್ತಡ ಹಾಕಿತ್ತು ಎಂದು ಸಾಕ್ಷಿ ಹಾಗೂ ದೂರುದಾರ ಹೇಳಿಕೆ ನೀಡಿದ್ದಾನೆಂಬ ಸುದ್ದಿ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ.
ಈ ಹಿನ್ನೆಲೆಯಲ್ಲಿ ವರದಿಗಳನ್ನು ಎಸ್ಐಟಿ ನಿರಾಕರಿಸಿದ್ದು, ವಿಚಾರಣೆ ವೇಳೆ ಸಾಕ್ಷಿ-ದೂರುದಾರ ಅಂತಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
ದೂರುದಾರನ ಅಂತಹ ಯಾವುದೇ ಹೇಳಿಕೆ ನಮಗೆ ಸಿಕ್ಕಿಲ್ಲ. ಪ್ರಸ್ತುತ, ನಾವು ಅವರನ್ನು ದೂರುದಾರ ಎಂದು ಪರಿಗಣಿಸುತ್ತೇವೆ. ಸೆಕ್ಷನ್ 164 ರ ಅಡಿಯಲ್ಲಿ ಅವರು ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಳ್ಳುವುದನ್ನು ಮುಂದುವರೆಸುತ್ತೇವೆಂದು ಎಸ್‌ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೊದಲು ದೂರುದಾರ ವ್ಯಕ್ತಿ ನೀಡಿರುವ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದೆ. ದೂರುದಾರರೊಂದಿಗೆ ಕೆಲಸ ಮಾಡಿದ ಇತರ ವ್ಯಕ್ತಿಗಳು, ಆಗಿನ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಇನ್ನೂ ಜೀವಂತವಾಗಿರುವ ಸಿಬ್ಬಂದಿ, ದೂರುದಾರರು ಉಲ್ಲೇಖಿಸಿದ 1994 ಮತ್ತು 2014 ರ ನಡುವೆ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆಂದು ತಿಳಿಸಿದರು.
ಇದೇ ವೇಳೆ ಎಸ್‌ಐಟಿ ಯೂಟ್ಯೂಬರ್‌ಗಳಿಗೆ ನೋಟಿಸ್ ನೀಡಿದೆ ಎಂಬ ವರದಿಗಳನ್ನೂ ಅಧಿಕಾರಿಗಳು ನಿರಾಕರಿಸಿದ್ದಾರೆ. ನಾವು ಯಾವುದೇ ನೋಟಿಸ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
1994-2014ರ ಅವಧಿಯಲ್ಲಿ ಕೆಲಸ ಮಾಡಿದ ಕೆಲವು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಕೆಲವರಿಗೆ ಸಮನ್ಸ್ ನೀಡಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಮಂಗಳವಾರ ಸಾಕ್ಷಿ-ದೂರುದಾರ ಮತ್ತು ಇತರ ಸಾಕ್ಷಿಗಳನ್ನು ಎಸ್ಐಟಿ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ದೂರುದಾರರು ಹೊರತೆಗೆದಿದ್ದಾನೆಂದು ಹೇಳಲಾಗುವ ತಲೆಬುರುಡೆ, ಇತರೆ ಸ್ಥಳದ ಬಗ್ಗೆಯೂ ಮುಂದಿನ ದಿನಗಳಲ್ಲಿ ಪ್ರಶ್ನಿಸಲಾಗುವುದು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.