ಡಿಕೆ ಶಿವಕುಮಾರ್ online desk
ರಾಜ್ಯ

ಕಾಂಗ್ರೆಸ್ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ರೂ ಹಾಕುತ್ತಿದ್ದೇವೆ: ಡಿಸಿಎಂ ಡಿ.ಕೆ ಶಿವಕುಮಾರ್

ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿ ಎರಡು ವರ್ಷವಾಗಿದೆ. ನೀವು ಇದರ ಬಗ್ಗೆ ಜನರಿಗೆ ನೆನಪಿಸುತ್ತಿರಬೇಕು. ನಾವು ಈ ಯೋಜನೆ ಜಾರಿ ಮಾಡಿ ನಿಮ್ಮ ಕೈಗೆ ಅಸ್ತ್ರ ನೀಡಿದ್ದೇವೆ ಎಂದು ಹೇಳಿದ್ದಾರೆ.

ಬೆಂಗಳೂರು: “ಕಾಂಗ್ರೆಸ್ ಸರ್ಕಾರಗಳ ವಿವಿಧ ಜನಪರ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ಹಣವನ್ನು ಹಾಕುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

“ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿ ಎರಡು ವರ್ಷವಾಗಿದೆ. ನೀವು ಇದರ ಬಗ್ಗೆ ಜನರಿಗೆ ನೆನಪಿಸುತ್ತಿರಬೇಕು. ನಾವು ಈ ಯೋಜನೆ ಜಾರಿ ಮಾಡಿ ನಿಮ್ಮ ಕೈಗೆ ಅಸ್ತ್ರ ನೀಡಿದ್ದೇವೆ. ನೀವು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ರೈತರ ಉಚಿತ ವಿದ್ಯುತ್ ಗೆ 20 ಸಾವಿರ ಕೋಟಿ, ವಿವಿಧ ಪಿಂಚಣಿ ಯೋಜನೆಗೆ 10 ಸಾವಿರ ಕೋಟಿ, ಪಂಚ ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ, ಸಮಾಜ ಕಲ್ಯಾಣ ಯೋಜನೆಗಳಿಗೆ ಸೇರಿ 1 ಲಕ್ಷ ಕೋಟಿಯಷ್ಟು ಹಣವನ್ನು ನಮ್ಮ ಸರ್ಕಾರ ಬಡವರ ಜೇಬಿಗೆ ಹಾಕುತ್ತಿದೆ. ಈ 1 ಲಕ್ಷ ಕೋಟಿ ಹಣದಲ್ಲಿ ಬಿಜೆಪಿ ಅಥವಾ ದಳದವರ ಒಂದು ಕಾರ್ಯಕ್ರಮ ಇದೆಯೇ? ನಾನು ಶಾಸಕನಾಗಿದ್ದಾಗ ಜೆ.ಹೆಚ್ ಪಟೇಲರ ಕಾಲದಲ್ಲಿ ಪಂಚಾಯ್ತಿಗಳಿಗೆ 1 ಲಕ್ಷ ಅನುದಾನ ನೀಡಲಾಗುತ್ತಿತ್ತು. ಕೃಷ್ಣ ಅವರ ಕಾಲದಲ್ಲಿ ಅದನ್ನು 5 ಲಕ್ಷಕ್ಕೆ ಏರಿಕೆ ಮಾಡಿದೆವು. 27 ಇಲಾಖೆಯನ್ನು ಪಂಚಾಯ್ತಿಗೆ ಸೇರಿಸಿದೆವು. ಪಂಚಾಯ್ತಿಗೆ ಈ ರೀತಿ ಶಕ್ತಿ ತುಂಬಿದ್ದು ಕಾಂಗ್ರೆಸ್ ಪಕ್ಷ” ಎಂದು ತಿಳಿಸಿದರು.

“ಜೆಡಿಎಸ್ ವಿಚಾರಕ್ಕೆ ಬಂದರೆ, ದೊಡ್ಡ ಗೌಡರು, ಅವರ ಮಕ್ಕಳು, ಮೊಮ್ಮಕ್ಕಳು ಯಾವ ತ್ಯಾಗ ಮಾಡಿದ್ದಾರೆ? ಇನ್ನು ಬಿಜೆಪಿ ವಿಚಾರಕ್ಕೆ ಬಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಏನು? ಅಧಿಕಾರಕ್ಕೆ ಬಂದ ನಂತರ ಬಡವರಿಗೆ ಹೊಟ್ಟೆ ತುಂಬಿಸಿದ್ದಾರಾ? ಜಮೀನು ಕೊಟ್ಟಿದ್ದಾರಾ? ರೈತರಿಗೆ ಮೊದಲು ಉಚಿತ ವಿದ್ಯುತ್ ಕೊಟ್ಟಿದ್ದು ಬಂಗಾರಪ್ಪ, ನಾನು ಸಚಿವನಾದ ಸಚಿವನಾದಾಗ 6 ತಾಸು ಇದ್ದ ವಿದ್ಯುತ್ ಅನ್ನು 7 ತಾಸಿಗೆ ಏರಿಸಿದೆ. ಮೊದಲು ಪ್ರತಿ ವರ್ಷ ಇದಕ್ಕಾಗಿ 800 ಕೋಟಿ ನೀಡುತ್ತಿದ್ದೆವು. ಈಗ 20 ಸಾವಿರ ಕೋಟಿ ನೀಡುತ್ತಿದ್ದೇವೆ” ಎಂದು ತಿಳಿಸಿದರು.

“ಇಂದು ಯುವಕರಿಗೆ ಬಹಳ ಸ್ಫೂರ್ತಿಯಾದಂತಹ ದಿನ. ಇತ್ತೀಚೆಗೆ ನಮ್ಮ ಯುವ ಮುಖಂಡ ಬಿ.ವಿ ಶ್ರೀನಿವಾಸ್ ಅವರು ರನ್ ಫಾರ್ ರಾಜೀವ್ ಎಂಬ ಮ್ಯಾರಥಾನ್ ಆಯೋಜಿಸಿದ್ದರು. ಸುಮಾರು 15 ಸಾವಿರ ಜನ ಬೆಳಗ್ಗೆ 5.30ಕ್ಕೆ ಬಂದು ಸೇರಿದ್ದರು. ಇಲ್ಲಿ ಅನೇಕ ಜನಸಾಮಾನ್ಯರು ಭಾಗವಹಿಸಿದ್ದರು. ರಾಜೀವ್ ಗಾಂಧಿ ಅವರ ಕೊಡುಗೆಯನ್ನು ನಮ್ಮ ಜನ ಇಂದಿಗೂ ಸ್ಮರಿಸುತ್ತಿದ್ದಾರೆ” ಎಂದರು.

“ನಾನು ವಿದ್ಯಾರ್ಥಿಯಾಗಿದ್ದಾಗ ನಾನು ಜೆನರಲ್ ಹಾಸ್ಟೆಲ್ ನಲ್ಲಿದ್ದೆ. ನಮ್ಮ ಊರಿನಲ್ಲಿ ಆಗ ದೂರವಾಣಿ ಸಂಪರ್ಕ ಇರಲಿಲ್ಲ. ಅದನ್ನು ಪಡೆಯಬೇಕಾದರೆ ಮೂರರಿಂದ ನಾಲ್ಕು ವರ್ಷ ಬೇಕಾಗುತ್ತದೆ. ಆದರೆ ಇಂದು ಪ್ರತಿಯೊಬ್ಬರು ಎರಡು ಮೂರು ಫೋನ್ ಇಟ್ಟುಕೊಂಡಿದ್ದಾರೆ. ಈ ದೇಶಕ್ಕೆ ಕಂಪ್ಯೂಟರ್ ಹಾಗೂ ದೂರವಾಣಿ ತಂತ್ರಜ್ಞಾನದ ಕ್ರಾಂತಿ ತಂದವರು ರಾಜೀವ್ ಗಾಂಧಿ” ಎಂದು ತಿಳಿಸಿದರು.

“ಯುವಕರ ಮೇಲೆ ರಾಜೀವ್ ಗಾಂಧಿ ಅವರಿಗೆ ವಿಶೇಷ ಕಾಳಜಿ. ಸಂವಿಧಾನಕ್ಕೆ 74ನೇ ತಿದ್ದುಪಡಿ ತಂದು ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರುವಂತೆ ನೋಡಿಕೊಂಡರು. ನಿನ್ನೆ ಸದನದಲ್ಲಿ ಬಿಜೆಪಿ ನಾಯಕರು 74ನೇ ತಿದ್ದುಪಡಿಗೆ ಧಕ್ಕೆಯಾಗುತ್ತದೆ ಎಂದು ಕುಣಿಯುತ್ತಿದ್ದರು. ನಾನು ಈ 74ನೇ ತಿದ್ದುಪಡಿಗೆ ಧಕ್ಕೆಯಾಗದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಗೊಳಿಸಿ ಐದು ಪಾಲಿಕೆ ರಚಿಸುತ್ತಿದ್ದೇವೆ. ನಾನು ಕೂಡ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಇಲ್ಲಿಯವರೆಗು ಬಂದಿದ್ದೇನೆ. ಸೆ.2ರವೆಳೆಗೆ ಹೊಸ ಪಾಲಿಕೆ ನಾಮಫಲಕ ಅಳವಡಿಸಲಾಗುವುದು. ನಂತರ ಕ್ಷೇತ್ರ ಮರುವಿಂಗಡಣೆ ಮಾಡಿ, ಮತದಾರರ ಪಟ್ಟಿ ಸಿದ್ಧಗೊಳಿಸಲು ಅವಕಾಶ ನೀಡಲಾಗಿದೆ. ಈ ಪ್ರಕ್ರಿಯೆ ಮುಗಿದ ನಂತರ ಪಾಲಿಕೆ ಚುನಾವಣೆ ನಡೆಸಲಾಗುವುದು. 21 ವಯೋಮಾನದವರಿಗಿದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದ್ದು ರಾಜೀವ್ ಗಾಂಧಿ ಅವರು. ಅಂತಹ ಧೀಮಂತ ನಾಯಕರನ್ನು ನಾವು ಸ್ಮರಿಸುತ್ತಿದ್ದೇವೆ” ಎಂದರು.

ಎಲ್ಲಾ ಸಮುದಾಯದ ಯುವಕರಿಗೆ ಆದ್ಯತೆ ನೀಡುವಂತೆ ಬಂಗಾರಪ್ಪ ಅವರಿಗೆ ಸೂಚಿಸಿದ್ದರು

“ಚನ್ನಪಟ್ಟಣದಲ್ಲಿ ಕೋಮುಗಲಭೆಯಾದ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿದ್ದರು. ನಾನು ಆಗ ಚನ್ನಪಟ್ಟಣದ ಒಂದು ಭಾಗದಲ್ಲಿ ಶಾಸಕನಾಗಿದ್ದೆ. ರಾಜೀವ್ ಗಾಂಧಿ ಅವರು ನನ್ನನ್ನು ಅವರ ಕಾರಿನಲ್ಲಿ ಕೂರಿಸಿಕೊಂಡು ಅನೇಕ ವಿಚಾರಗಳ ಬಗ್ಗೆ ವಿಚಾರಿಸಿದರು. ಕುಮಾರಕೃಪ ಅತಿಥಿ ಗೃಹಕ್ಕೆ ಬರುವಾಗ ನಾನು ಸೇರಿದಂತೆ ಇತರೆ ನಾಯಕರು ಬಂಗಾರಪ್ಪನವರಿಗೆ ಆಪ್ತ ನಾಯಕರು ಇದ್ದೆವು. ಆ ಸಂದರ್ಭದಲ್ಲಿ ವಿರೇಂದ್ರ ಪಾಟೀಲ್ ಅವರ ಅರೋಗ್ಯ ಹದಗೆಡುತ್ತಿತ್ತು. ರಾಜೀವ್ ಗಾಂಧಿ ಅವರಿಗೆ ಅವರ ನಾಯಕತ್ವ ಬದಲಿಸುವ ಬಯಕೆ ಇರಲಿಲ್ಲ, ಆದರೆ ಆರೋಗ್ಯ ಹದಗೆಟ್ಟ ಕಾರಣ ನಾಯಕತ್ವ ಬದಲಾವಣೆ ತೀರ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಬಂಗಾರಪ್ಪ ಅವರನ್ನು ಮಾಡಬೇಕು ಎಂದು ತೀರ್ಮಾನಿಸಿದರು. ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರು ಬಂಗಾರಪ್ಪನವರಿಗೆ ನೀವು ಎಲ್ಲಾ ಸಮುದಾಯದ ಯುವಕರಿಗೆ ಅವಕಾಶ ನೀಡಬೇಕು ಎಂದು ನಿರ್ದೇಶನ ನೀಡಿದರು. ನಮ್ಮ ಜಿಲ್ಲೆಯಲ್ಲಿ ಚಿಕ್ಕೇಗೌಡರು ದೊಡ್ಡ ನಾಯಕರಾಗಿದ್ದರೂ ನಾನು ಸಚಿವನಾದೆ” ಎಂದು ತಿಳಿಸಿದರು.

“ಈಗ ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾಗಿರುವ ಅನೇಕ ನಾಯಕರು ರಾಜೀವ್ ಗಾಂಧಿ ಅವರ ಕಾಲದಲ್ಲಿ ಬೆಳೆದು ಬಂದವರು. ಈ ದೇಶದ ಸಮಗ್ರತೆ, ಐಕ್ಯತೆ ಶಾಂತಿಗಾಗಿ ನಮ್ಮ ಪಕ್ಷದ ನಾಯಕರು ಮಾಡಿರುವ ತ್ಯಾಗ ಬಲಿದಾನ ಬೇರೆ ಪಕ್ಷದ ನಾಯಕರು ಮಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಚುನಾವಣೆ ನಡೆಸಲು ಪತ್ರ ಬರೆದಿದ್ದು, ಇದನ್ನು ಯಾವ ರೀತಿ ನಡೆಸಬೇಕು ಎಂದು ತೀರ್ಮಾನ ಮಾಡಲು ಸಮಿತಿ ರಚಿಸಲಿದ್ದೇನೆ” ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT