ಬೆಂಗಳೂರು: ಆನ್‌ಲೈನ್ ರಿಯಲ್ ಮನಿ ಗೇಮಿಂಗ್(ಆರ್‌ಎಂಜಿ) ಮೇಲೆ ಸಂಪೂರ್ಣ ನಿಷೇಧ ಹೇರುವ ಕೇಂದ್ರದ ನಿರ್ಧಾರಕ್ಕೆ ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು "ಮೋದಿ ಸರ್ಕಾರದ ಕೆಟ್ಟ ನೀತಿ ನಿರೂಪಣೆಯ ಮತ್ತೊಂದು ಮಾಸ್ಟರ್‌ಸ್ಟ್ರೋಕ್" ಎಂದು ಟೀಕಿಸಿದ್ದಾರೆ.
ಕೇಂದ್ರದ ಈ ನಿರ್ಧಾರವು ರಾಜ್ಯದ ಆದಾಯ, ಉದ್ಯೋಗ ಮತ್ತು ಹೂಡಿಕೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹೇಳಿದ್ದಾರೆ.
"ಆನ್‌ಲೈನ್ ಆರ್‌ಎಂಜಿ ಮೂಲಕ ಭಾರತವು ಜಿಎಸ್‌ಟಿ ಮತ್ತು ಆದಾಯ ತೆರಿಗೆಯಿಂದ ವಾರ್ಷಿಕ 20,000 ಕೋಟಿ ರೂ. ಗಳಿಸುತ್ತಿದೆ. ನಿಷೇಧವು ರಾಜ್ಯಗಳು ಈ ಆದಾಯವನ್ನು ಕಸಿದುಕೊಳ್ಳುತ್ತದೆ" ಎಂದು ಪ್ರಿಯಾಂಕ್ ಖರ್ಗೆ ಅವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
2,000 ಕ್ಕೂ ಹೆಚ್ಚು ಗೇಮಿಂಗ್ ಸ್ಟಾರ್ಟ್‌ಅಪ್‌ಗಳು ಮತ್ತು ಐಟಿ, ಎಐ ಹಾಗೂ ವಿನ್ಯಾಸದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಅಪಾಯಕ್ಕೆ ಸಿಲುಕುತ್ತವೆ ಎಂದು ಸಚಿವರು ತಿಳಿಸಿದ್ದಾರೆ.
"ಈ ನಿಷೇಧವು ಭಾರತದ ಗೇಮಿಂಗ್ ಪ್ರತಿಭೆಗಳನ್ನು ಕೊಲ್ಲುತ್ತದೆ ಮತ್ತು ಉದ್ಯಮಿಗಳನ್ನು ವಿದೇಶಕ್ಕೆ ತಳ್ಳುತ್ತದೆ. ಹೂಡಿಕೆಗಳು ಒಣಗುತ್ತವೆ. ಕಳೆದ ಐದು ವರ್ಷಗಳಲ್ಲಿ ರೂ. 23,000 ಕೋಟಿ ವಿದೇಶಿ ನೇರ ಹೂಡಿಕೆ ಬಂದಿದೆ. ಭಾರತ ತನ್ನದೇ ಆದ ಡಿಜಿಟಲ್ ಉದ್ಯಮವನ್ನು ಮುಚ್ಚಿದರೆ ಜಾಗತಿಕ ಹೂಡಿಕೆದಾರರು ಹಿಂದೆ ಸರಿಯುತ್ತಾರೆ" ಎಂದು ಖರ್ಗೆ ಹೇಳಿದ್ದಾರೆ.
ಕೇಂದ್ರ ಅಥವಾ ರಾಜ್ಯಗಳಿಗೆ ಇದನ್ನು ನಿಯಂತ್ರಿಸುವ ಅಧಿಕಾರವಿದೆಯೇ ಎಂದು ಸುಪ್ರೀಂ ಕೋರ್ಟ್ ಇನ್ನೂ ನಿರ್ಧರಿಸಿಲ್ಲ. "ಈಗ ನಿಷೇಧಿಸಲು ಆತುರ ಏಕೆ?" ಎಂದು ಖರ್ಗೆ ಪ್ರಶ್ನಿಸಿದರು.
ಕೇಂದ್ರ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿದ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಯು ಆನ್‌ಲೈನ್ ಮನಿ ಗೇಮಿಂಗ್ ಅಥವಾ ಅದರ ಜಾಹೀರಾತುಗಳನ್ನು ನಿಷೇಧಿಸುತ್ತದೆ ಮತ್ತು ಅವುಗಳನ್ನು ನೀಡುವ ಅಥವಾ ಜಾಹೀರಾತು ಮಾಡುವವರಿಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಸೂಚಿಸುತ್ತದೆ.