ಡಿ.ಕೆ ಶಿವಕುಮಾರ್ (ಸಂಗ್ರಹ ಚಿತ್ರ) 
ರಾಜ್ಯ

ಕಳಸಾ ಬಂಡೂರಿ: ನಮ್ಮ ಪಾಲಿನ ನೀರು ಬಳಸಲು ಸಂಪೂರ್ಣ ಹಕ್ಕಿದೆ; ಅಗತ್ಯ ಬಿದ್ದರೆ ಅರ್ಜಿ ಹಿಂಪಡೆಯಲು ಸಿದ್ಧ- ಡಿ.ಕೆ ಶಿವಕುಮಾರ್

ನಾನು ನಾಲ್ಕು ಬಾರಿ ಕೇಂದ್ರ ಜಲ ಶಕ್ತಿ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದು, ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಅವರಿಗೆ ಯಾವ ರಾಜಕೀಯ ಒತ್ತಡ ಇದೆಯೋ ಗೊತ್ತಿಲ್ಲ.

ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಮೂಲಕ ನಮ್ಮ ಪಾಲಿನ ನೀರನ್ನು ಬಳಸಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ. ಈ ವಿಚಾರವಾಗಿ ನಾವೆಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಕೋನರೆಡ್ಡಿ ಅವರು ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸಿಎಂ ಅಲ್ಲಿನ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಇಡೀ ರಾಜ್ಯದ ಜನ ಪಕ್ಷಬೇಧ ಮರೆತು ಈ ವಿಚಾರವಾಗಿ ಹೋರಾಟ ಮಾಡಿದ್ದಾರೆ.

ನ್ಯಾಯಾಲಯದಲ್ಲಿ ಇದರ ತೀರ್ಪು ಬಂದಿದ್ದು, ನಮ್ಮ ರಾಜ್ಯಕ್ಕೆ ಅಗತ್ಯ ಪಾಲಿನ ನೀರು ಹಂಚಿಕೆ ಮಾಡಲಾಗಿದೆ. 2022ರಲ್ಲಿ ಕೇಂದ್ರ ಜಲ ಆಯೋಗ ಕೂಡ ಈ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಿತು. ಹುಬ್ಬಳ್ಳಿ ಧಾರವಾಡದಲ್ಲಿ ಶಾಸಕರುಗಳು ಸೇರಿ ವಿಜಯೋತ್ಸವವನ್ನು ಆಚರಿಸಿದರು ಎಂದರು.

ಈ ಮಧ್ಯೆ ಗೋವಾದ ಅಧಿಕಾರಿ ಈ ಯೋಜನೆ ಪ್ರಶ್ನಿಸಿ ನಮ್ಮ ಸರ್ಕಾರಕ್ಕೆ ಶೋಕಾಸ್ ನೋಟೀಸ್ ನೀಡಿದ್ದಾರೆ. ಅವರು ನಮ್ಮ ರಾಜ್ಯಕ್ಕೆ ಹೇಗೆ ನೋಟೀಸ್ ನೀಡಲು ಸಾಧ್ಯ? ಕೆಲವು ವಿಚಾರದಲ್ಲಿ ಕೇಂದ್ರ ಸರ್ಕಾರ ನಮಗೆ ನೋಟೀಸ್ ನೀಡಬಹುದು. ನಮ್ಮ ರಾಜ್ಯದ ಅಧಿಕಾರಿ ಬೇರೆ ರಾಜ್ಯಕ್ಕೆ ನೋಟೀಸ್ ನೀಡಲು ಸಾಧ್ಯವೇ? ನಾವು ಆ ನೋಟೀಸ್ ಗೆ ಹೆಚ್ಚು ಮಾನ್ಯತೆ ನೀಡದೇ ಯೋಜನೆ ಮುಂದುವರಿಸಬೇಕಿತ್ತು. ಆದರೆ ಆಗ ನಮ್ಮ ರಾಜ್ಯದವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಂದು ನಾನು ಅಧಿಕಾರದಲ್ಲಿ ಇದ್ದಿದ್ದರೆ, ಆ ನೋಟೀಸ್ ಕೊಡಲು ನೀನು ಯಾರು ಎಂದು ಪ್ರಶ್ನೆ ಮಾಡುತ್ತಿದ್ದೆ ಎಂದರು.

ನಾನು ನಾಲ್ಕು ಬಾರಿ ಕೇಂದ್ರ ಜಲ ಶಕ್ತಿ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದು, ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಅವರಿಗೆ ಯಾವ ರಾಜಕೀಯ ಒತ್ತಡ ಇದೆಯೋ ಗೊತ್ತಿಲ್ಲ. ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಮೂರು ಬಾರಿ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈ ತಿಂಗಳು ಮತ್ತೆ ದೆಹಲಿಗೆ ಬಂದು ಭೇಟಿ ಮಾಡುವಂತೆ ದಿನಾಂಕ ನೀಡಿದ್ದಾರೆ. ಕಳಸಾ ಬಂಡೂರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಮೀಸಲಾಗಿರುವ ಪ್ರತಿಯೊಂದು ಹನಿ ನೀರನ್ನು ಬಳಸಲು ಎಲ್ಲಾ ಹಕ್ಕು ಇದೆ.

ನಾನು ಇಲಾಖೆ ಅಧಿಕಾರ ವಹಿಸಿಕೊಂಡ ಬಳಿಕ ಟೆಂಡರ್ ಕರೆದು ಗುತ್ತಿಗೆಯನ್ನು ಅಂತಿಮಗೊಳಿಸಿದ್ದೇನೆ. ಕಾನೂನು ವಿಚಾರಗಳನ್ನು ಸ್ವಲ್ಪ ಅಧ್ಯಯನ ಮಾಡುತ್ತಿದ್ದು, ಈ ವಿಚಾರದಲ್ಲಿ ಕಾನೂನು ತೊಡಕು ಇದ್ದರೆ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆದು ನಾವು ಯೋಜನೆ ಆರಂಭಿಸಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಚಾರವಾಗಿ ಅಡ್ವೊಕೇಟ್ ಜನರಲ್ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ವಿವರಿಸಿದರು.

ಇದು ನಮ್ಮ ರಾಜ್ಯದ ಹಿತದ ವಿಚಾರ. ಇದು ಅನಗತ್ಯವಾಗಿ ವಿಳಂಬವಾದರೆ ನೀರು ಸುಮ್ಮನೆ ಹರಿದು ಹೋಗುತ್ತಿರುತ್ತದೆ. ನಾವೆಲ್ಲರೂ ಈ ವಿಚಾರದಲ್ಲಿ ಒಗ್ಗಟ್ಟಿನ ಹೋರಾಟ ಮಾಡಬೇಕು. ನಾನು ದಿನಾಂಕ ನಿಗದಿ ಮಾಡುತ್ತೇನೆ ಎಲ್ಲರೂ ಹೋಗಿ ಈ ಯೋಜನೆ ಜಾರಿಗೆ ಆಗ್ರಹ ಮಾಡೋಣ. ನಾನು ಈ ವಿಚಾರವಾಗಿ ಪ್ರಧಾನಮಂತ್ರಿಗಳ ಮುಂದೆಯೂ ಪ್ರಸ್ತಾಪ ಮಾಡಿದ್ದೇನೆ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ನೀವು ಒತ್ತಡ ಹಾಕಿ. ಈ ಯೋಜನೆ ಜಾರಿಯಾದರೆ ಕೇವಲ ಒಂದೇ ವರ್ಷದಲ್ಲಿ ಫಲಿತಾಂಶ ಕಾಣಲಿದೆ ಎಂದು ತಿಳಿಸಿದರು.

ಈ ವೇಳೆ ಬೆಲ್ಲದ್ ಅವರು ಮಾತನಾಡಿ, ನಾವು ಒತ್ತಡ ಹಾಕುವುದಿಲ್ಲ, ನೀವು ಕೋರ್ಟ್ ನಲ್ಲಿ ತೀರ್ಮಾನ ಮಾಡಿಸಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ನ್ಯಾಯಾಲಯದಲ್ಲಿ ಈ ವಿಚಾರ ಬಗೆಹರಿಯಲು ಸಾಧ್ಯವೇ ಇಲ್ಲ. ನ್ಯಾಯಾಲಯದ ಮೆಟ್ಟಿಲೇರಿದರೆ ಅದು ಎಲ್ಲೆಲ್ಲೋ ಹೋಗುತ್ತದೆ. ಗೋವಾ ಅಧಿಕಾರಿ ನಮ್ಮ ರಾಜ್ಯಕ್ಕೆ ನೋಟೀಸ್ ನೀಡಲು ಹೇಗೆ ಸಾಧ್ಯ? ಬೇರೆ ಪಕ್ಷದಲ್ಲಿರುವ ನಿಮಗೆ ನಾನು ನೋಟೀಸ್ ನೀಡಲು ಸಾಧ್ಯವೇ? ಅಥವಾ ನೀವು ನನಗೆ ನೋಟೀಸ್ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಈ ವೇಳೆ ಬೆಲ್ಲದ್ ಅವರು ಉಪಮುಖ್ಯಮಂತ್ರಿಗಳ ನಿಲುವು ಸರಿಯಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT