ಬೆಂಗಳೂರು: ಚಿನ್ನ ಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನವನ್ನು ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರು ಮೇಲ್ಮನೆಯ ಎಲ್ಲಾ ಎಂ.ಎಲ್.ಸಿ.ಗಳಿಗೆ ಉಡುಗೊರೆಯಾಗಿ ಮಂಗಳವಾರ ನೀಡಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಸದನದ ಎಲ್ಲಾ ಸದಸ್ಯರಿಗೆ ಚಿನ್ನದ ಲೇಪಿತ ಬೆಳ್ಳಿಯ ಗಂಡಭೇರುಂಡ ಲಾಂಛನವನ್ನು ಶರವಣ ಅವರು ವಿತರಿಸಿದರು.
ಮಂಗಳವಾರ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಯಲ್ಲಿ ಲಾಂಛನ ಇರುವ ಪೆಟ್ಟಿಗೆಯನ್ನು ಸದಸ್ಯರಿಗೆ ನೀಡಲು ಹಸ್ತಾಂತರ ಮಾಡಿದರು.
ಈ ವೇಳೆ ಉಪಸ್ಥಿತರಿದ್ದ ಅನೇಕ ಸದಸ್ಯರಿಗೆ ಟಿ.ಎ. ಶರವಣ ಅವರೇ ಲಾಂಛನ ನೀಡಿದರು. ಕಲಾಪದ ವೇಳೆ ಸಭಾಪತಿ ಸೇರಿದಂತೆ ಅನೇಕ ಸದಸ್ಯರು ಲಾಂಛನ ಧರಿಸಿದ್ದು ಗಮನ ಸೆಳೆಯಿತು.
ಬಳಿಕ ಮಾತನಾಡಿದ ಶರವಣ ಅವರು, ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ಶಾಸಕರು ಧರಿಸುವ ಲಾಂಛನವು ಮೂಲವಾಗಿರಬೇಕು. ರಾಜ್ಯ ಸರ್ಕಾರದ ಲಾಂಛನವಾಗಿರುವ ಗಂಡಭೇರುಂಡ ಲಾಂಛನವನ್ನು ಎಂ.ಎಲ್.ಸಿ.ಗಳಿಗೆ ವಿತರಿಸುವ ಕುರಿತು ಸಭಾಪತಿ ಬಳಿ ವಿನಂತಿಸಿದೆ. ಅದಕ್ಕೆ ಅವರು ಒಪ್ಪಿದರು. ಬಳಿಕ ವಿತರಿಸಿದೆ. ಕೆಳಮನೆಯ ಸದಸ್ಯರು ಕೂಡ ಕೇಳಿದ್ದು, ಎಲ್ಲಾ 224 ಶಾಸಕರಿಗೂ ನೀಡುತ್ತೇನೆ. ಎಲ್ಲರೂ ಈ ಲಾಂಛನವನ್ನು ಧರಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.