ಬೆಳ್ತಂಗಡಿ: ಬಿಜೆಪಿ ನಾಯಕ ಬಿ ಎಲ್ ಸಂತೋಷ್ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಿದರೂ ನಿನ್ನೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇಂದು ಗುರುವಾರ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಪೊಲೀಸರು ಹೋದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಹೊರಗೆ ಹೈಡ್ರಾಮಾ ನಡೆದಿದ್ದು, ಕೊನೆಗೆ ಪೊಲೀಸರ ಜೊತೆ ತಮ್ಮ ಖಾಸಗಿ ಕಾರಿನಲ್ಲಿಯೇ ಮಹೇಶ್ ತಿಮರೋಡಿ ಉಡುಪಿಯ ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿದರು. ಈ ಸಂದರ್ಭದಲ್ಲಿ ಮಹೇಶ್ ತಿಮರೋಡಿ ಅವರ ಬೆಂಬಲಿಗರು ಸಹ ಇದ್ದರು.
ಬಿಜೆಪಿ ನಾಯಕ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ತಿಮರೋಡಿಯವರು ಬಿ ಎಲ್ ಸಂತೋಷ್ ಸೇರಿದಂತೆ ಹಲವು ಜನರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದರು.
ಇಂದು ಖಾಸಗಿ ಕಾರಿನಲ್ಲಿ ಕುಳಿತು ಮಾಧ್ಯಮ ಪ್ರತಿನಿಧಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ ತಿಮರೋಡಿ, ನನ್ನ ಜೀವಕ್ಕೆ ಏನಾದರೂ ಅಪಾಯವಾದರೆ ಅದಕ್ಕೆ ಸರ್ಕಾರ ಮತ್ತು ಬಿಜೆಪಿಯವರೇ ಕಾರಣ, ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡುತ್ತೇನೆ ಎಂದರು.