ಚಿತ್ರದುರ್ಗ: ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿ ಹಾಗೂ ಅವರ ಸಹೋದರರ, ಚಳ್ಳಕೆರೆ ಪಟ್ಟಣದಲ್ಲಿರುವ 4 ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ಮಡುತ್ತಿದ್ದಾರೆ.
ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮತ್ತು ಇತರರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯು 30 ಸ್ಥಳಗಳಲ್ಲಿ ಶೋಧ ನಡೆಸಿದೆ. ಚಿತ್ರದುರ್ಗ ಜಿಲ್ಲೆಯಾದ್ಯಂತ (ಆರು ಸ್ಥಳ), ಬೆಂಗಳೂರು ನಗರ (10 ಸ್ಥಳ), ಜೋಧ್‌ಪುರ (ಮೂರು ಸ್ಥಳ), ಹುಬ್ಬಳ್ಳಿ (ಒಂದು ಸ್ಥಳ), ಮುಂಬೈ (ಎರಡು ಸ್ಥಳ) ಮತ್ತು ಗೋವಾ (ಐದು ಕ್ಯಾಸಿನೊಗಳು ಸೇರಿದಂತೆ ಎಂಟು ಸ್ಥಳ - ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ ಮತ್ತು ಬಿಗ್ ಡ್ಯಾಡಿ ಕ್ಯಾಸಿನೊ) ಮೇಲೆ ದಾಳಿ ನಡೆಸುತ್ತಿದೆ.
ಮೂಲಗಳ ಪ್ರಕಾರ, ವೀರೇಂದ್ರ ಅವರು ಕಿಂಗ್ 567, ರಾಜ 567, ಪಪ್ಪೀಸ್ 003, ರತ್ನ ಗೇಮಿಂಗ್ ಮುಂತಾದ ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ಅವರ ಸಹೋದರ ಕೆ ಸಿ ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್ ಮತ್ತು ಪ್ರೈಮ್ 9 ಟೆಕ್ನಾಲಜೀಸ್ ಎಂಬ ಮೂರು ವ್ಯವಹಾರ ಸಂಸ್ಥೆಗಳನ್ನು "ನಿರ್ವಹಿಸುತ್ತಿದ್ದಾರೆ" ಎಂದು ಆರೋಪಿಸಲಾಗಿದೆ.
ಈ ಸಂಸ್ಥೆಗಳು ಕಾಲ್ ಸೆಂಟರ್ ಸೇವೆಗಳು ಮತ್ತು ವೀರೇಂದ್ರ ಅವರ ಗೇಮಿಂಗ್ ವ್ಯವಹಾರಕ್ಕೆ "ಸಂಬಂಧಪಟ್ಟಿವೆ".
ಏಜೆನ್ಸಿ ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿರುವ ಕಾಂಗ್ರೆಸ್ ನಾಯಕಿ ಕುಸುಮಾ ಎಚ್ (ಕಾಂಗ್ರೆಸ್ ಟಿಕೆಟ್‌ನಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು) ಅವರ ಸಹೋದರ ಅನಿಲ್ ಗೌಡ ಎಂಬ ವ್ಯಕ್ತಿಯ ಸ್ಥಳವನ್ನೂ ಸಹ ಶೋಧಿಸಲಾಗಿದೆ.
2016ರಲ್ಲಿಯೂ ದಾಳಿ
20ಕ್ಕೂ ಹೆಚ್ಚು ವಾಹನದಲ್ಲಿ ಬಂದಿರುವ 40ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಮನೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಅಂದರೆ 2016ರ ಡಿಸೆಂಬರ್ 11 ರಂದು ಕೆಸಿ ವೀರೇಂದ್ರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ವಿರೇಂದ್ರ ಮನೆಯ ಬಾತ್ ರೂಂನಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ಹಣ, 30 ಕೆಜಿಗೂ ಹೆಚ್ಚು ಚಿನ್ನ ಪತ್ತೆ ಆಗಿತ್ತು.