ಧರ್ಮಸ್ಥಳದ ಧರ್ಮಾಧಿಕಾರಿಗಳ ಕುಟುಂಬದ ವಿರುದ್ದ ಯೂಟ್ಯೂಬ್ ಮೂಲಕ ಅಪಪ್ರಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎಂಡಿ ಇಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾನೆ. ಮೂವರು ವಕೀಲ ಜೊತೆ ಬೆಳ್ತಂಗಡಿ ಠಾಣೆ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದನು. ಸಮೀರ್ ಎಂಡಿಗೆ ಪೊಲೀಸರು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಒಟ್ಟು ಮೂರು ಪ್ರಕರಣದಲ್ಲಿ ಸಮೀರ್ ಎಂಡಿ ವಿಚಾರಣೆ ನಡೆಸಲಾಗುತ್ತಿದೆ. AI ವಿಡಿಯೋ ಮತ್ತು ಉಜಿರೆ ಬಳಿ ಖಾಸಗಿ ವಾಹಿನಿ ವರದಿಗಾರನ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಇಂದು ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಪೊಲೀಸರು ನಾಳೆ ಬೆಳಗ್ಗೆ 10 ಗಂಟೆಗೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಬಿಟ್ಟು ಕಳುಹಿಸಿದ್ದಾರೆ. ವಿಚಾರಣೆ ವೇಳೆ, ವೀಡಿಯೊದಲ್ಲಿ ಹೇಳಿರುವ ವಿಚಾರಗಳ ಮೂಲ ನಿಮಗೆ ಎಲ್ಲಿಂದ ಸಿಕ್ತು?. ಅವು ನಿಜವಾದ ದಾಖಲೆಗಳೇ ಅಥವಾ ತಾವು ಕೃತಕವಾಗಿ ಸೃಷ್ಟಿಸಿದಿರಾ?, ವೀಡಿಯೊದಲ್ಲಿ ಮಾಡಿದ ಆರೋಪಗಳ ನಿಜಾಸತ್ಯತೆ ನಿಮಗೆ ಗೊತ್ತಿದೆಯಾ? ಇನ್ನೂ ಎಷ್ಟು ಮಂದಿ ಈ ವೀಡಿಯೊ ತಯಾರಿಕೆಯಲ್ಲಿ ನೇರ/ಪರೋಕ್ಷವಾಗಿ ಭಾಗವಹಿಸಿದ್ದಾರೆ? ವೀಡಿಯೊ ವೈರಲ್ ಮಾಡಲು ಯಾವುದೇ ಪೇಯ್ಡ್ ಪ್ರೊಮೋಶನ್ ಮಾಡಿದ್ದೀರಾ? ಎಂಬ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ.
ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿಯನ್ನು ಕೋರ್ಟ್ ಆಗಸ್ಟ್ 28ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. ಇಂದು ಬೆಳಿಗ್ಗೆ ಶಾಸಕರನ್ನು ಸಿಕ್ಕಿಂನಿಂದ ಬೆಂಗಳೂರಿಗೆ ಕರೆತರಲಾಗಿದ್ದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಡಿ ವಿಶೇಷ ತಂಡ ಶಾಸಕರನ್ನು ವಶಕ್ಕೆ ತೆಗೆದುಕೊಂಡಿದೆ. ವೀರೇಂದ್ರ ಪಪ್ಪಿ, ಆತನ ಸಹೋದರ ಮತ್ತು ಇತರರ ವಿರುದ್ಧ ಅಕ್ರಮ ಬೆಟ್ಟಿಂಗ್-ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದ ಭಾಗವಾಗಿ ಕೇಂದ್ರೀಯ ತನಿಖಾ ಸಂಸ್ಥೆಯು ಹಲವಾರು ರಾಜ್ಯಗಳಲ್ಲಿ ಶೋಧ ನಡೆಸಿತು. ಇನ್ನು ದಾಳಿ ವೇಳೆ ಪಪ್ಪಿ ಮನೆಯಲ್ಲಿ 1 ಕೋಟಿ ವಿದೇಶಿ ಕರೆನ್ಸಿ ಸೇರಿದಂತೆ 12 ಕೋಟಿ ರೂಪಾಯಿ ನಗದು, 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಮತ್ತು ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಕೇಂದ್ರದ ತನಿಖಾ ಸಂಸ್ಥೆ ತಿಳಿಸಿದೆ.
ವಿಧಾನಸಭೆಯ ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಜಾನ್ ಕುರಿತಾಗಿ ಪ್ರಸ್ತಾಪಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೋರ್ವ ವಿಡಿಯೋ ಮಾಡಿ ಶಾಸಕರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯತ್ನಾಳ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕನಕಗಿರಿ ಪೊಲೀಸರು ಆರೋಪಿ ಕನಕಗಿರಿಯ ಮುಸಲಾಪುರ ಗ್ರಾಮದ ಮುಸ್ಲಿಂ ಯುವಕ ಹುಸೇನಿಯನ್ನು ಬಂಧಿಸಿದ್ದಾರೆ. ನೀನು ಬೂಟು ನೆಕ್ಕಿದ ವಂಶಸ್ಥ ಎಂದು ಯುವಕ ಹುಸೇನಿ ನಾಲಿಗೆ ಹರಿಬಿಟ್ಟಿದ್ದನು. ಈ ವಿಡಿಯೋಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಯತ್ನಾಳ್ ಬೆಂಬಲಿಗರು ಮುಸಲಾಪುರ ಗ್ರಾಮದಲ್ಲಿ ಜಮಾಯಿಸಿದ್ದರಿಂದ ಸ್ಥಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹುಸೇನಿಯನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಆತ ಕ್ಷಣೆಯಾಚಿಸಿದ್ದಾನೆ.
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಭಾನು ಮುಷ್ತಾಕ್ ಅವರು ಆಯ್ಕೆಯಾಗಿರುವುದಕ್ಕೆ ಇದೀಗ ವಿರೋಧ ವ್ಯಕ್ತವಾಗುತ್ತಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಭಾನು ಮುಷ್ತಾಕ್ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗುವುದರ ಮೂಲಕ ದಸರಾವನ್ನು ಉದ್ಘಾಟಿಸಬೇಕು. ಭಾನು ಅವರು ಮುಸ್ಲಿಂ ಆಗಿರುವುದರಿಂದ ಅವರ ಸ್ವಂತ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ ಪ್ರತಾಪ್ ಸಿಂಹ ಮಾತನಾಡಿ, ಅಲ್ಲಾ ಬಿಟ್ಟರೆ ಬೇರೆ ಯಾರೂ ದೇವರಿಲ್ಲ ಎನ್ನುತ್ತದೆ ಇಸ್ಲಾಂ. ಹಾಗಾದರೆ ಬಾನು ಮುಷ್ತಾಕ್ ಹೇಗೆ ತಾಯಿ ಚಾಮುಂಡಿಯನ್ನು ದೇವರು ಎಂದು ಒಪ್ಪಿಕೊಳ್ಳುತ್ತಾರೆ. ಅವರ ಧರ್ಮ ಅವರ ಮಾತನ್ನು ಒಪ್ಪುತ್ತಾ ಎಂದು ಪ್ರಶ್ನಿಸಿದರು. ಇನ್ನು ಈ ಬಗ್ಗೆ ಸಿಟಿ ರವಿ ಸಹ ಮಾತನಾಡಿದ್ದು ಚಾಮುಂಡಿ ತಾಯಿ ಮೇಲೆ ನಂಬಿಕೆ, ಭಕ್ತಿ ಇದ್ದರೆ ಅವರು ಉದ್ಘಾಟಿಸುತ್ತಾರೆ ಈ ಬಗ್ಗೆ ನಾನೇನು ಕಮೆಂಟ್ ಮಾಡುವುದಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ರಹಸ್ಯವಾಗಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ದೂರುದಾರ ಸಿಎನ್ ಚಿನ್ನಯ್ಯನನ್ನು ಬಂಧಿಸಿತ್ತು. ಇದೀಗ ಚಿನ್ನಯ್ಯಗೆ ಸಂಬಂಧಿಸಿದ ನಿರ್ಣಾಯಕ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ವಂಚನೆ ಮತ್ತು ಸಾಕ್ಷ್ಯಾಧಾರಗಳ ರಚನೆ ಆರೋಪ ಆತನ ಮೇಲಿದೆ. ಎಸ್‌ಐಟಿ ಅಧಿಕಾರಿಗಳ ತಂಡವು ಮಂಡ್ಯ ಮತ್ತು ತಮಿಳುನಾಡಿಗೆ ಭೇಟಿ ನೀಡಿ, ಶಂಕಿತನ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ವಿವರಗಳನ್ನು ಸಂಗ್ರಹಿಸಿದೆ. ಇನ್ನು ಅನನ್ಯಾ ಭಟ್ ಧರ್ಮಸ್ಥಳದಿಂದ ನಾಪತ್ತೆಯಾಗಿದ್ದಾಳೆ ಎಂದು ಗೊಂದಲದ ಹೇಳಿಕೆ ನೀಡಿ ಸುದ್ದಿಯಾಗಿರುವ ಸುಜಾತಾ ಭಟ್ ಗೆ ಈಗ ಬನಶಂಕರಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಬನಶಂಕರಿಯಲ್ಲಿ ಸುಜಾತಾ ಭಟ್ ವಾಸಿಸುತ್ತಿದ್ದು ಮನೆಯ ಬಳಿ ಸಾರ್ವಜನಿಕರು, ಮಾಧ್ಯಮದವರು ಬಾರದಂತೆ ನಿರ್ಬಂಧ ಹೇರಿ, ಯಾರೂ ಮನೆಯ ಹತ್ತಿರ ಬರದಂತೆ ನೋಡಿಕೊಳ್ಳಿ ಎಂದು ಸುಜಾತ ಭಟ್ ಪೊಲೀಸರಿಗೆ ಮನವಿ ಮಾಡಿದ್ದರು.