ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಹೊಸ ನಿಗಮಗಳು ರಚನೆಯಾದ ನಂತರ ಕೆರೆಗಳು, ಮಳೆನೀರು ಚರಂಡಿಗಳು ಮತ್ತು ಪ್ರಮುಖ ರಸ್ತೆ ಮೂಲಸೌಕರ್ಯಗಳನ್ನು ಆಯಾ ವಾರ್ಡ್'ಗಳ ಎಂಜಿನಿಯರ್‌ಗಳು ನಿರ್ವಹಣೆ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ.
ಪ್ರಸ್ತುತ, ವಾರ್ಡ್ ಗಳ ಎಂಜಿನಿಯರ್ ಗಳು ಒಂದು ತಂಡದೊಂದಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಕಚೇರಿಯಲ್ಲಿ ಮುಖ್ಯ ಎಂಜಿನಿಯರ್‌ಗಳು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ವಾರ್ಡ್'ಗಳನ್ನು 40,000 ಜನಸಂಖ್ಯೆಗೆ ವಿಂಗಡಿಸಲಾಗುತ್ತದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಥವಾ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಕೆರೆ, ಮಳೆನೀರು ಚರಂಡಿ ಮತ್ತು ಪ್ರಮುಖ ರಸ್ತೆ ನಿರ್ವಹಣೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗುತ್ತದೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಕೆರೆ ಇಲಾಖೆಯ ಮೂಲಗಳು ತಿಳಿಸಿವೆ.
ಅಧಿಕಾರಿಗಳ ಈ ನಡೆಯನ್ನು ಕೆಲ ನಿವಾಸಿಗಳು ಸ್ವಾಗತಿಸಿದ್ದಾರೆ. ಕೆರೆ ಅಭಿವೃದ್ಧಿ ಮತ್ತು ಇತರ ಚಟುವಟಿಕೆಗಳಿಗೆ ಅನುಮತಿ ಪಡೆಯುವುದು, ದೂರು ನೀಡಲು ಅಲೆದಾಡುವುದನ್ನು ಈ ಕ್ರಮ ನಿಯಂತ್ರಿಸುತ್ತದೆ ಎಂದು ಹೇಳಿದ್ದಾರೆ.
ಆದರೆ, ಕೆರೆ ಮತ್ತು ಒಳಚರಂಡಿ ನಿರ್ವಹಣೆಗೆಂದೇ ಅಧಿಕಾರಿಗಳನ್ನು ನಿಯೋಜನೆಗೊಳಿಸುವುದು ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
ಪ್ರಸ್ತುತ, ರಾಜಕಾಲುವೆ, ಕೆರೆ ನಿರ್ವಹಣೆಗಾಗಿ ನಿಯೋಜಿಸಲಾಗಿರುವ ಅಧಿಕಾರಿಗಳು ಭೂವಿಜ್ಞಾನ, ಜಲವಿಜ್ಞಾನ, ಪರಿಸರ ವಿಜ್ಞಾನ ಮತ್ತು ಲಿಮ್ನಾಲಜಿಯಲ್ಲಿ ಅಧ್ಯಯನದ ಹಿನ್ನೆಲೆಯನ್ನು ಹೊಂದಿರುವವರಾಗಿದ್ದಾರೆ.
ರಾಜಕಾಲುವೆ, ಕೆರೆ ನಿರ್ವಹಣೆಗೆ ಈ ಕ್ಷೇತ್ರದಲ್ಲಿ ತಜ್ಞರ ಅಗತ್ಯವಿದೆ. ಆದರೆ, ಇವುಗಳ ನಿರ್ವಹಣೆಗೆ ರಸ್ತೆ ಮೂಲಸೌಕರ್ಯ ಎಂಜಿನಿಯರ್‌ಗಳನ್ನು ನಿಯೋಜಿಸಿದರೆ, ಅದು ವಿಪತ್ತಿಗೆ ಕಾರಣವಾಗಬಹುದು ಎಂದು ಫ್ರೆಂಡ್ಸ್ ಆಫ್ ಲೇಕ್ಸ್‌ನ ರಾಮಪ್ರಸಾದ್ ಅವರು ಹೇಳಿದ್ದಾರೆ.