ಬೆಂಗಳೂರು: ನಕಲಿ ಆಕ್ಯುಪೆನ್ಸಿ ಸರ್ಟಿಫಿಕೇಟ್ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯುತ್ತಿರುವುದನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ( ಬೆಸ್ಕಾಂ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳಲು ಮುಂದಾಗಿದೆ.
ಇದರಂತೆ ಏಪ್ರಿಲ್ 1 ರಿಂದ ಆಕ್ಯುಪೆನ್ಸಿ ಪ್ರಮಾಣಪತ್ರಗಳಿಲ್ಲದೆ (OCs) ಪಡೆದಿರುವ ಹೊಸ ವಿದ್ಯುತ್ ಸಂಪರ್ಕಗಳ ಮಾಹಿತಿಗಳನ್ನು ಸಂಗ್ರಹಿಸಲು ಬಿಬಿಎಂಪಿ ಮತ್ತು ಬೆಸ್ಕಾಂ ಒಟ್ಟಾಗಿ ಕೆಲಸ ಮಾಡುತ್ತಿವೆ.
ಮೂರು ತಿಂಗಳ ಹಿಂದೆ ಬೆಸ್ಕಾಂನಲ್ಲಿ ವಿದ್ಯುತ್ ಸಂಪರ್ಕಗಳಿಗಾಗಿ ಸುಮಾರು ಒಂದು ಲಕ್ಷ ಅರ್ಜಿಗಳು ಬಂದಿದ್ದು, ಆಗಸ್ಟ್ 22 ರ ವೇಳೆಗೆ 59,566 ಅರ್ಜಿಗಳು ಬಾಕಿ ಇದ್ದವು ಎಂದು ಇಂಧನ ಇಲಾಖೆ ನೀಡಿರುವ ಮಾಹಿತಿಗಳಿಂದ ತಿಳಿದುಬಂದಿದೆ.
ಬಾಕಿ ಉಳಿದಿದ್ದ 59,566 ಅರ್ಜಿಗಳ ಪೈಕಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಗಳನ್ನು ಕೋರಿ 22,450 ಅರ್ಜಿಗಳು ಬೆಂಗಳೂರಿನಿಂದ ಬಂದಿದ್ದವು. ವಿಲೇವಾರಿಯಾಗಿರುವ ಹಲವು ಅರ್ಜಿಗಳು ಆಕ್ಯುಪೆನ್ಸಿ ಪ್ರಮಾಣಪತ್ರಗಳಿಲ್ಲದೆ ವಿದ್ಯುತ್ ಸಂಪರ್ಕ ಪಡೆದಿರುವ ಸಾಧ್ಯತೆ ಅಥವಾ ನಕಲಿ ದಾಖಲೆಗಳನ್ನು ಸಲ್ಲಿಸಿರುವ ಕುರಿತು ಅನುಮಾನಗಳು ಮೂಡಿವೆ. ಹೀಗಾಗಿ, ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಏಪ್ರಿಲ್ 1 ರಿಂದ ವಿದ್ಯುತ್ ಸಂಪರ್ಕಗಳನ್ನು ಪಡೆಯಲು ಆಕ್ಯುಪೆನ್ಸಿ ಸರ್ಟಿಫಿಕೇಟ್ ಕಡ್ಡಾಯ ಎಂದು ಆದೇಶ ಹೊರಡಿಸಿದೆ.
ಕಳೆದ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ನೀತಿಯಲ್ಲಿ ಬದಲಾವಣೆ ತರುವ ಬಗ್ಗೆ ಚರ್ಚೆ ನಡೆಸಿದೆ.
ರಾಜ್ಯ ಸರ್ಕಾರವು ಬಿ-ಖಾತಾ ಆಸ್ತಿಗಳಿಗೆ ಕಾನೂನು ಮಾನ್ಯತೆಯನ್ನು ಅನುಮೋದಿಸಿದ ನಂತರ ಬಿಬಿಎಂಪಿ ಆಕ್ಯುಪೆನ್ಸಿ ಸರ್ಟಿಫಿಕೇಟ್ ನೀಡುವುದನ್ನು ನಿಲ್ಲಿಸಿತ್ತು. ಆಕ್ಯುಪೆನ್ಸಿ ಸರ್ಟಿಫಿಕೇಟ್ ನೀಡದೆ ಬಿಬಿಎಂಪಿ ತಪ್ಪು ಮಾಡಿದೆ. ಅದರರ್ಥ ಎಲ್ಲಾ ಆಸ್ತಿಗಳು ಅಕ್ರಮವಾಗಿವೆ ಎಂದಲ್ಲ. ಕೆಲವು ಆಸ್ತಿಗಳು ಸಕ್ರಮವೂ ಆಗಿದೆ. ಆದರೆ, ಅಕ್ರಮಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಅನಧಿಕೃತ ಆಸ್ತಿಗಳಿಗೆ ನೀಡಲಾದ ವಿದ್ಯುತ್ ಮತ್ತು ನೀರು ಸರಬರಾಜು ಸಂಪರ್ಕಗಳನ್ನು ರದ್ದುಗೊಳಿಸಬೇಕು. ಆದರೆ ಹಾಗೆ ಮಾಡಲಾಗುತ್ತಿಲ್ಲ ಎಂದು ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.