ಮಂಡ್ಯ: ಮಂಡ್ಯ ಜಿಲ್ಲೆಯ ಬೇಲೂರು ಕೆರೆಯಲ್ಲಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ 28 ವರ್ಷದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಮಂಡ್ಯದ ಯರಹಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಯುವಕರ ಗುಂಪೊಂದು ತಡರಾತ್ರಿ ಗಣೇಶ ವಿಸರ್ಜನೆ ಮಾಡುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ತಿಳಿಸಿದ್ದಾರೆ.
"ರಾತ್ರಿ ವೇಳೆ ಯುವಕರು ಬೇಲೂರು ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡುತ್ತಿದ್ದರು. ಈ ಸಮಯದಲ್ಲಿ, ಯುವಕರೊಂದಿಗೆ ನೀರಿಗೆ ಇಳಿದಿದ್ದ ಪ್ರದೀಪ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಪ್ರದೀಪ್ ಮದ್ಯ ಸೇವಿಸಿ ನೀರಿಗೆ ಇಳಿದಿದ್ದರು ಎಂದು ಶಂಕಿಸಲಾಗಿದೆ" ಎಂದು ಎಸ್ಪಿ ಹೇಳಿದ್ದಾರೆ.
"ಅಗ್ನಿಶಾಮಕ ದಳದ ಸಿಬ್ಬಂದಿ ಪ್ರದೀಪ್ ಮೃತದೇಹವನ್ನು ಹೊರತೆಗೆದಿದ್ದು, ಈ ಸಂಬಂಧ ಮಂಡ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.