ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಸತತ ಮೂರನೇ ದಿನವೂ ದೂರುದಾರರಲ್ಲಿ ಒಬ್ಬರಾದ ಸುಜಾತಾ ಭಟ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. 2003ರಲ್ಲಿ ತಮ್ಮ ಮಗಳು ಅನನ್ಯಾ ಧರ್ಮಸ್ಥಳ ದೇವಸ್ಥಾನದ ಆವರಣದಿಂದ ನಾಪತ್ತೆಯಾಗಿದ್ದಳು ಎಂದು ಈ ಹಿಂದೆ ಸುಜಾತಾ ಭಟ್ ಆರೋಪಿಸಿದ್ದರು. ವಿಚಾರಣೆಯ ಸಮಯದಲ್ಲಿ ದೂರನ್ನು ಹಿಂಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ವಿಚಾರಣೆ ವೇಳೆ ಆಕೆ ಗಮನಾರ್ಹ ಒತ್ತಡದಲ್ಲಿರುವಂತೆ ಕಂಡುಬಂದಿದೆ. ನಿರಂತರ ವಿಚಾರಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತನಿಖಾಧಿಕಾರಿಗಳು ಗಮನಿಸಿದ್ದಾರೆ. ವಿಚಾರಣೆ ವೇಳೆ ಅವರ ಹೇಳಿಕೆಗಳು ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿವೆ ಎಂದು ಎಸ್‌ಐಟಿ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಆಕೆ ಸುಳ್ಳು ಹೇಳುತ್ತಿದ್ದು ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಸುಜಾತಾ ಈ ಹಿಂದೆ ತಮ್ಮ ಮಗಳ ನಾಪತ್ತೆಯು ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಹೇಳಿದ್ದು ಅದರಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಕೆಲವು ವ್ಯಕ್ತಿಗಳ ಹೆಸರುಗಳನ್ನು ಇಂದಿನ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ ಎಂದು ಆರೋಪಿಸಿ ಕಟ್ಟುಕಥೆ ಸೃಷ್ಟಿಸಿದ್ದರಿಂದ ಈ ಪ್ರಕರಣ ವ್ಯಾಪಕ ಗಮನ ಸೆಳೆದಿತ್ತು. ಸುಜಾತಾ ಅವರ ಹೇಳಿಕೆಗಳನ್ನು ಪರಿಶೀಲಿಸಿ ದೂರನ್ನು ದೃಢೀಕರಿಸಲು ಪುರಾವೆಗಳನ್ನು ಸಂಗ್ರಹಿಸುವತ್ತ ಎಸ್‌ಐಟಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. ಸುಜಾತಾ ಭಟ್ ಔಪಚಾರಿಕವಾಗಿ ತನ್ನ ದೂರನ್ನು ಹಿಂತೆಗೆದುಕೊಂಡರೂ, ಈ ವಿಷಯವು ಗಂಭೀರ ಆರೋಪಗಳನ್ನು ಒಳಗೊಂಡಿರುವುದರಿಂದ ಮತ್ತು ಈಗಾಗಲೇ ನ್ಯಾಯಾಂಗ ಪ್ರಕ್ರಿಯೆಯನ್ನು ಪ್ರವೇಶಿಸಿರುವುದರಿಂದ ಎಸ್‌ಐಟಿ ತನಿಖೆಯನ್ನು ಮುಂದುವರಿಸುವ ಸಾಧ್ಯತೆಯಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.
ರಾಜಕೀಯ ತಿಕ್ಕಾಟ ಮತ್ತು ಸಾರ್ವಜನಿಕ ಚರ್ಚೆಗಳಿಗೆ ಕಾರಣವಾಗಿರುವ ಈ ಪ್ರಕರಣವು ಪ್ರಮುಖ ಆದ್ಯತೆಯಾಗಿದ್ದು ಮುಂಬರುವ ವಾರಗಳಲ್ಲಿ ಎಸ್‌ಐಟಿ ಮಧ್ಯಂತರ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.