ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಚಿಕ್ಕಪೇಟೆ ಮಾಜಿ ಶಾಸಕ ಆರ್ ವಿ ದೇವರಾಜ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಚಾಮುಂಡಿ ತಾಯಿ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ.
67 ವರ್ಷದ ಆರ್‌ವಿ ದೇವರಾಜ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರು. ಇದೇ ಡಿಸೆಂಬರ್ 3ರಂದು ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಇಂದು ಚಾಮುಂಡೇಶ್ವರಿ ದರ್ಶನಕ್ಕಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು.
ಈ ವೇಳೆ ಸಂಜೆ 7 ಗಂಟೆ ಸುಮಾರಿನಲ್ಲಿ ಮೈಸೂರಿನಲ್ಲಿ ಆರ್‌ವಿ ದೇವರಾಜ್‌ಗೆ ಹೃದಯಾಘಾತ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೃದಯಾಘಾತ ಆಗುತ್ತಿದ್ದಂತೆ ಮೊದಲಿಗೆ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿಕತ್ಸೆಗಾಗಿ ಅಲ್ಲಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರ್‌ವಿ ದೇವರಾಜ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಅವರ ಪಾರ್ಥಿವ ಶರೀರ ಜಯದೇವ ಆಸ್ಪತ್ರೆಯಲ್ಲೇ ಇದ್ದು, ನಾಳೆ ಬೆಂಗಳೂರಿಗೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.