ಕರ್ನಾಟಕದ ರಾಜಭವನವನ್ನು ಇನ್ನು ಮುಂದೆ 'ಲೋಕಭವನ, ಕರ್ನಾಟಕ' ಎಂದು ಕರೆಯಲಾಗುವುದು ಎಂದು ರಾಜ್ಯಪಾಲರ ಸಚಿವಾಲಯ ಬುಧವಾರ ತಿಳಿಸಿದೆ. "ಭಾರತ ಸರ್ಕಾರದ ಗೃಹ ಸಚಿವಾಲಯದ ಸಂವಹನದ ಅನುಸಾರವಾಗಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಅನುಮೋದನೆಯ ನಂತರ ಈ ಬದಲಾವಣೆ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ರಾಜ್ಯಪಾಲರ ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ. ಭವಿಷ್ಯದ ಎಲ್ಲಾ ಪತ್ರವ್ಯವಹಾರಗಳಲ್ಲಿ "ರಾಜಭವನ ಕರ್ನಾಟಕ" ಅನ್ನು "ಲೋಕಭವನ ಕರ್ನಾಟಕ" ಎಂದು ಉಲ್ಲೇಖಿಸಲು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಈ ಮೂಲಕ ಸೂಚಿಸಲಾಗಿದೆ.
ಕುರ್ಚಿ ಕದನದ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಮ್ಮೆ ದೆಹಲಿಗೆ ಪ್ರಯಾಣಿಸಿದ್ದಾರೆ. ದೆಹಲಿಗೆ ಹೊರಡುವುದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಖಾಸಗಿ ಕಾರ್ಯಕ್ರಮ ಹಾಗೂ ಮತಕಳ್ಳತನ ವಿರುದ್ಧದ ಡಿ.14ರ ಪ್ರತಿಭಟನೆಗೆ ತಯಾರಿ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದೇನೆ. ಇದರ ಹೊರತಾಗಿ ಈ ಪ್ರವಾಸಕ್ಕೆ ರಾಜಕೀಯ ಮಹತ್ವವೇನೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಡಿಕೆ ಶಿವಕುಮಾರ್ ದೆಹಲಿ ಭೇಟಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ, 'ಅವರನ್ನು ಹೋಗಲು ಬಿಡಿ. ಯಾರಾದರೂ ಅವರಿಗೆ ಬೇಡ ಎಂದು ಹೇಳಿದ್ದಾರೆಯೇ? ಔಪಚಾರಿಕವಾಗಿ ಆಹ್ವಾನ ನೀಡದ ಹೊರತು ನಾನು ನವದೆಹಲಿಗೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ನಾರಾಯಣ ಗುರು-ಮಹಾತ್ಮ ಗಾಂಧಿ ಸಂವಾದದ ಶತಮಾನೋತ್ಸವ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ- ಹೈಕಮಾಂಡ್ ನಾಯಕ ಕೆಸಿ ವೇಣುಗೋಪಾಲ್ ಮಂಗಳೂರಿಗೆ ಆಗಮಿಸಿದಾಗ ಸಿಎಂ-ಡಿಸಿಎಂ ಅಭಿಮಾನಿಗಳು ತಮ್ಮ ನಾಯಕರ ಪರ ಘೋಷಣೆಗಳನ್ನು ಕೂಗಿದ ಘಟನೆಯೂ ವರದಿಯಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಡಿ ಕೆ ಶಿವಕುಮಾರ್ ಪರ ಘೋಷಣೆಗಳೊಂದಿಗೆ ಸ್ವಾಗತಿಸಲಾಯಿತು. ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ಅವರ ಬೆಂಬಲಿಗರು ಪೂರ್ಣಾವಧಿ ಸಿಎಂ ಸಿದ್ದರಾಮಯ್ಯ ಎಂದು ಪ್ರತಿ ಘೋಷಣೆ ಕೂಗಿದರು.
ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಪರಾಧದ ಗಂಭೀರತೆ ಮತ್ತು ಬಾಕಿ ಇರುವ ಇತರ ಪ್ರಕರಣಗಳ ಮೇಲಿನ ಸಂಭಾವ್ಯ ಪರಿಣಾಮದಿಂದಾಗಿ ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಟಿ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಶೇಷ ತನಿಖಾ ದಳ ಸಲ್ಲಿಸಿರುವ ಬಿ ರಿಪೋರ್ಟ್ ಅನ್ನು ಜನ ಪ್ರತಿನಿಧಿಗಳ ನ್ಯಾಯಾಲಯ ತಿರಸ್ಕರಿಸಿದ್ದು, ಡಿ.29ರ ಒಳಗೆ ತನಿಖಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಇದರಿಂದಾಗಿ ಜಾಮೀನಿನ ಮೇಲೆ ಹೊರಗಿರುವ ಸೂರಜ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 1.71 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತ ಮಲೇಷ್ಯಾದಿಂದ ಬೆಂಗಳೂರಿಗೆ ಆಗಮಿಸಿದ್ದ. ಪ್ರಯಾಣಿಕನನ್ನು NDPS ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ' ಎಂದು ಬೆಂಗಳೂರು ಕಸ್ಟಮ್ಸ್ 'X' ನಲ್ಲಿನ ಪೋಸ್ಟ್ ನಲ್ಲಿ ತಿಳಿಸಿದೆ. ನವೆಂಬರ್ 18 ರಿಂದ 30 ರವರೆಗೆ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 19.65 ಲಕ್ಷ ಸಿಗರೇಟ್, 4,830 ಇ-ಸಿಗರೇಟ್, 69.67 ಕೆಜಿ ಗಾಂಜಾ, 115 ಎಲೆಕ್ಟ್ರಾನಿಕ್ ವಸ್ತುಗಳು ಮತ್ತು 280 ಟಾರಂಟುಲಾಗಳು ಮತ್ತು 2,809 ಅಳಿವಿನಂಚಿನಲ್ಲಿರುವ ಮೀನುಗಳು ಸೇರಿದಂತೆ ವನ್ಯಜೀವಿ ಪ್ರಭೇದಗಳನ್ನು ವಶಪಡಿಸಿಕೊಂಡಿದ್ದು, ಕಳ್ಳಸಾಗಣೆ ಜಾಲವನ್ನು ಪತ್ತೆಹಚ್ಚಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
'ಕಾಂತಾರ' ಚಿತ್ರದಲ್ಲಿ ಚಿತ್ರಿಸಲಾದ 'ದೈವ' ಸಂಪ್ರದಾಯವನ್ನು ಅಪಹಾಸ್ಯ ಮಾಡುವ ಮತ್ತು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರು ಬುಧವಾರ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಕೀಲ ಪ್ರಶಾಂತ್ ಮೆಥಲ್ ಸಲ್ಲಿಸಿದ ದೂರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿ ವರದಿಗಳು ಮತ್ತು ವೀಡಿಯೊ ದೃಶ್ಯಾವಳಿಗಳನ್ನು ಉಲ್ಲೇಖಿಸಲಾಗಿದೆ.