ಬೆಂಗಳೂರು: ಕರ್ನಾಟಕ ಸರ್ಕಾರವು ಸರ್ಕಾರಿ ವಲಯದ ಉದ್ಯೋಗಿಗಳಿಗೂ ತಿಂಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆಯನ್ನು ವಿಸ್ತರಿಸಿದೆ.
ವಿವಿಧ ವಲಯಗಳ 18 ರಿಂದ 52 ವರ್ಷ ವಯಸ್ಸಿನ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು (ವೇತನ ಸಹಿತ) ಕಡ್ಡಾಯಗೊಳಿಸಿ ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿತ್ತು.
2025ರ ನವೆಂಬರ್ 12ರಂದು, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ತೋಟ ಕಾರ್ಮಿಕರ ಕಾಯ್ದೆ, ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ, ಮೋಟಾರು ಸಾರಿಗೆ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳೂ ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುತ್ತಿರುವ 18 ರಿಂದ 52 ವರ್ಷದ ಎಲ್ಲ ಕಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು ನೀಡುವಂತೆ ಎಲ್ಲ ಉದ್ಯೋಗದಾತರಿಗೂ ಸೂಚಿಸಲಾಗಿದೆ.
ಈಗ, ಡಿಸೆಂಬರ್ 2 ರಂದು, ರಾಜ್ಯದ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೂ ತಕ್ಷಣದಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ರಜೆ ನೀಡುವಂತೆ ಸರ್ಕಾರ ಆದೇಶಿಸಿದೆ. 18 ರಿಂದ 52 ವರ್ಷದೊಳಗಿನ ಋತುಮತಿಯಾಗುವ ಮಹಿಳಾ ಸರ್ಕಾರಿ ನೌಕರರು ಈ ರಜೆ ಪಡೆಯಲು ಅರ್ಹರು.
ಸಾಂದರ್ಭಿಕ ರಜೆ ಮಂಜೂರು ಮಾಡುವ ಅಧಿಕಾರ ಹೊಂದಿರುವ ಪ್ರಾಧಿಕಾರವೇ ಮುಟ್ಟಿನ ರಜೆಯನ್ನು ಮಂಜೂರು ಮಾಡಬಹುದು ಮತ್ತು ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ರಜೆಯನ್ನು ರಜೆ/ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು ಮತ್ತು ಮುಟ್ಟಿನ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸಬಾರದು ಎಂದು ಅದು ಹೇಳಿದೆ.
ವಿವಿಧ ವಲಯಗಳ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ದೇಶನವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ (ಬಿಎಚ್‌ಎ) ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ನೀಡಲಾಗುತ್ತಿಲ್ಲ ಎದು ಸಂಘವು ಎತ್ತಿ ತೋರಿಸುವ ಮೂಲಕ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿತ್ತು.