ಬೆಂಗಳೂರು: ಬೆಂಗಳೂರು: 2025-26 ನೇ ಹಣಕಾಸು ಸಾಲಿನಲ್ಲಿ ಅಬಕಾರಿ ಇಲಾಖೆಗೆ 43,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ.
ವಿಧಾನಸೌಧದಲ್ಲಿ ನಡೆದ ತೆರಿಗೆ ಸಂಗ್ರಹ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, 2025-26 ನೇ ಹಣಕಾಸು ಸಾಲಿನಲ್ಲಿ 43,000 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿದ್ದು, ನವೆಂಬರ್ ಅಂತ್ಯದವರೆಗೆ 26,215 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಅಬಕಾರಿ ತೆರಿಗೆ ಸಂಗ್ರಹದಲ್ಲಿ ಶೇ.10.46ರಷ್ಟು ಬೆಳವಣಿಗೆ ದರವನ್ನು ಸಾಧಿಸಲಾಗಿದೆ. ನಿಗದಿತ ಗುರಿಯನ್ನು ಸಾಧಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.
ವಾಣಿಜ್ಯ ಇಲಾಖೆಗೆ ಎಷ್ಟು 'ಟಾರ್ಗೆಟ್'?
2025-26 ನೇ ಹಣಕಾಸು ಸಾಲಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ 1,20,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನಿಗದಿಪಡಿಸಲಾಗಿದೆ.
ನವೆಂಬರ್ ಅಂತ್ಯದವರೆಗೆ ರೂ. 80 ಸಾವಿರ ಕೋಟಿ ಗುರಿ ನಿಗದಿಪಡಿಸಲಾಗಿತ್ತು, ಇದರಲ್ಲಿ 72,131 ಕೋಟಿ ರೂ. ನಿವ್ವಳ ಸಂಗ್ರಹ ಮಾಡಲಾಗಿದ್ದು, ಶೇ.90 ಸಾಧನೆ ಮಾಡಲಾಗಿದೆ. ಇದರಲ್ಲಿ 53,522 ಕೋಟಿ ಜಿಎಸ್ ಟಿ, .17,595 ಕೋಟಿ ಕೆಎಸ್‌ಟಿ ಮತ್ತು 1,014 ಕೋಟಿ ರೂ. ವೃತಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರಂಭದ ಐದು ತಿಂಗಳಲ್ಲಿ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಶೇ.12ರಷ್ಟು ಬೆಳವಣಿಗೆ ದರ ಸಾಧಿಸಲಾಗಿದೆ. ಆದರೆ ಜಿಎಸ್‌ಟಿ ದರಗಳಲ್ಲಿ ಬದಲಾವಣೆ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಕಳೆದ ಮೂರು ತಿಂಗಳಲ್ಲಿ ಕೇವಲ ಶೇ.3ರಷ್ಟು ಬೆಳವಣಿಗೆ ದರ ಸಾಧ್ಯವಾಗಿದೆ. ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಸೂಚನೆ ನೀಡಿದರು.
ನವೆಂಬರ್ ಅಂತ್ಯದವರೆಗೆ ಸುಮಾರು 13 ಸಾವಿರ ತಪಾಸಣೆಗಳನ್ನು ಮಾಡಿದ್ದು, ತಪಾಸಣೆಯಿಂದ ರೂ. 3,183 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ವಾಣಿಜ್ಯ ತೆರಿಗೆ ವಿಚಕ್ಷಣಾ ದಳ ತೆರಿಗೆ ಕಳ್ಳತನವನ್ನು ತಪ್ಪಿಸಲು ನಿರಂತರ ತಪಾಸಣೆಗಳನ್ನು ಕೈಗೊಳ್ಳಬೇಕು. ತೆರಿಗೆ ತಪ್ಪಿಸಲು ಯಾವುದೇ ಅವಕಾಶ ಇಲ್ಲದಂತೆ ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ: ಹಿಂದಿನ ವರ್ಷಗಳ ಅಂಕಿ ಅಂಶಗಳನ್ನು ಬಳಸಿಕೊಂಡು, ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಿ, ಅನಾಲಿಸಿಸ್ ವಿಭಾಗವನ್ನು ಬಲಪಡಿಸಬೇಕು. ಬೋಗಸ್ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪ್ರಕರಣಗಳ ಮೇಲೆ ನಿಗಾ ಇರಿಸಿ ಅಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ ಎಂದರು.