ಬೆಂಗಳೂರು, ರಾಜ್ಯದಲ್ಲಿ 'ಶೇ. 63ರಷ್ಟು ಭ್ರಷ್ಟಾಚಾರವಿದೆ' ಎಂಬ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದರ ಬೆನ್ನಲ್ಲೇ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ನಿರ್ದಿಷ್ಟ ಸರ್ಕಾರ ಅಥವಾ ಅವಧಿಯನ್ನು ಉಲ್ಲೇಖಿಸಿಲ್ಲ. ಅಲ್ಲದೇ ನಾನು ಯಾವ ಸರ್ಕಾರವನ್ನೂ ಗಮನದಲ್ಲಿಟ್ಟುಕೊಂಡು ಹೇಳಿಲ್ಲ. ಇಂಡಿಯಾ ಕರಪ್ಷನ್ ಸರ್ವೆಯಲ್ಲಿದ್ದ ಮಾಹಿತಿಯನ್ನು ಮಾತ್ರ ಹೇಳಿದ್ದೇನೆ. 2019 ರಲ್ಲಿ ನಡೆದಿದ್ದ ಸರ್ವೇ ಪ್ರಕಾರ, ಆಗ ಶೇ. 63ರಷ್ಟು ಭ್ರಷ್ಟಾಚಾರ ಇದೆ ಎಂದು ವರದಿಯಾಗಿತ್ತು. ನಾನು ಅದನ್ನು ಮಾತ್ರ ಹೇಳಿದ್ದೇನೆಂದು ಹೇಳಿದ್ದಾರೆ.
ನನ್ನ ಹೇಳಿಕೆಯನ್ನು ತಿರುಚಲಾಗಿದೆ. ರಾಜಕೀಯ ನಾಯಕರು ಇದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ನಾನು 'ನಮ್ಮ ದೇಶ, ನಮ್ಮ ರಾಜ್ಯ' ಎಂದು ಸಾಮಾನ್ಯೀಕರಿಸಿ ಮಾಡಿ ಮಾತನಾಡಿದ್ದೇನೆ. ನನ್ನ ಹೇಳಿಕೆಯನ್ನು ಈ ರೀತಿ ಬಳಕೆ ಮಾಡಿಕೊಂಡಿರುವುದು ನನಗೆ ನಿಜಕ್ಕೂ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರಕ್ಕೆ ಸಮಾಜ ಮತ್ತು ಜನರು ಕೂಡ ಕಾರಣ. ಆರಂಭದಿಂದಲೂ ಎಲ್ಲಾ ಸರ್ಕಾರಗಳು ಕೂಡ ಭ್ರಷ್ಟಾಚಾರದಲ್ಲಿ ಇವೆ. ನಾನು ಯಾವುದೇ ಒಂದು ನಿರ್ದಿಷ್ಟ ಸರ್ಕಾರ ಅಂತ ಗುರಿಯಾಗಿಸಿ ಹೇಳಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ,