ಬೆಂಗಳೂರು: ಡಿಸೆಂಬರ್ 6 ಭಾರತವು ಬಾಬಾಸಾಹೇಬ ಅಂಬೇಡ್ಕರ್ ಮತ್ತು ಭಾತೃತ್ವವನ್ನು ಕಳೆದುಕೊಂಡ ದಿನವಾಗಿದ್ದು, ಇದು ಭಾರತೀಯರಿಗೆ ಕರಾಳ ದಿನವಾಗಿದೆ ಎಂದು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ, ವಕೀಲೆ ಮತ್ತು ಕಾರ್ಯಕರ್ತೆಯೂ ಆಗಿರುವ ಬಾನು ಮುಷ್ತಾಕ್ ಶನಿವಾರ ಹೇಳಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದ (ಬಿಎಲ್‌ಎಫ್) 14 ನೇ ಆವೃತ್ತಿಯಲ್ಲಿ ಆಶಯ ನುಡಿಗಳ ಜತೆಗೆ, ‘ಬಾನು ಬಾನುವಾಗಿ, ಬಾನು ಬಂಡಾಯವಾಗಿ’ ಗೋಷ್ಠಿಯನ್ನು ಉದ್ದೇಶಿಸಿ ಬಾನು ಮುಷ್ತಾಕ್ ಅವರು ಮಾತನಾಡಿದರು.
ದೇಶದ ಜನರಿಗೆ ಸಮಾನತೆ ಭ್ರಾತೃತ್ವವನ್ನು ಬೋಧಿಸಿದ್ದ ಅಂಬೇಡ್ಕರ್ ಅವರು ಪರಿನಿರ್ವಾಣವಾದದ್ದು ಇದೇ ದಿನ. ಇದೇ ದಿನ ಬಾಬ್ರಿ ಮಸೀದಿಯೂ ಧ್ವಂಸವಾಯಿತು. ಅಲ್ಲಿ ಧ್ವಂಸವಾಗಿದ್ದು ಮಸೀದಿಯಲ್ಲ. ಬದಲಿಗೆ ದೇಶದ ಜನರ ಭ್ರಾತೃತ್ವ ಭಾವನೆ. ಇವೆರಡೂ ನಮ್ಮ ಪ್ರಜಾಪ್ರಭುತ್ವಕ್ಕೆ ಆದ ನಷ್ಟ ಎಂದು ಹೇಳಿದರು.
ಕೆಲವೊಮ್ಮೆ ಇತಿಹಾಸವನ್ನು ತಿರುಗಿ ನೋಡಲೇಬೇಕಾಗುತ್ತದೆ. ನಾವು ಕಳೆದುಕೊಂಡದ್ದು ಏನು ಮತ್ತು ಮುಂದೇನು ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ಹಿಂತಿರುಗಿ ನೋಡಲೇಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ತತ್ವಗಳು ಈ ಭೂಮಿಯ ಕಾನೂನು ಮತ್ತು ನೈತಿಕ ಮೌಲ್ಯಗಳಾಗಿ ಮಾರ್ಪಟ್ಟವು. ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವು ಸಂವಿಧಾನದ ತ್ರಿಮೂರ್ತಿಗಳಷ್ಟೇ ಅಲ್ಲ, ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಶಿಸ್ತಿಗೆ ಕಾರಣವಾಗಿದೆ. ಈ ಮೂರು ನಮ್ಮ ಜೀವನ ಮತ್ತು ಸಮಾಜದಲ್ಲಿ ನೈತಿಕ ಪ್ರಕ್ರಿಯೆಯ ಭಾಗವಾಗಬೇಕು ಎಂಬುದನ್ನು ಇದು ನಮಗೆ ನೆನಪಿಸುತ್ತದೆ.
ಈ ದಿನವು ಬಾಬ್ರಿ ಮಸೀದಿಯ ಧ್ವಂಸವನ್ನೂ ಸ್ಮರಿಸುವಂತೆ ಮಾಡುತ್ತದೆ. ಬಾಬ್ರಿ ಮಸೀದಿ ಧ್ವಂಸ ದಿನದಂದು ಭಾರತವು ತನ್ನ ಭಾತೃತ್ವವನ್ನು ಕಳೆದುಕೊಂಡಿತು. ಇತಿಹಾಸಕ್ಕೆ ಅದು ಉಂಟುಮಾಡಿದ ವಿನಾಶ ಅಥವಾ ನೋವು ಜನರಲ್ಲಿ ನಾವು ಯಾವ ನೈತಿಕ ಮೌಲ್ಯಗಳನ್ನು ನಿರ್ಮಿಸಬೇಕು ಎಂಬುದರ ಬಗ್ಗೆ ಯೋಚಿಸುವಂತೆ ಮಾಡಿದೆ. ಅದು ಅತ್ಯಗತ್ಯವೂ ಆಗಿದೆ.
ಅಂಬೇಡ್ಕರ್ ಅವರು ಸಹೋದರತ್ವವಿಲ್ಲದೆ ಸಮಾನತೆ ಇಲ್ಲ ಎಂದು ಹೇಳಿದ್ದರು. ಇತಿಹಾಸದಲ್ಲಿನ ಹಲವಾರು ಘಟನೆಗಳು ಸಹೋದರತ್ವದ ಅನುಪಸ್ಥಿತಿಯಲ್ಲಿ, ಪ್ರಜಾಪ್ರಭುತ್ವದ ಮೂಲವು ಕಣ್ಮರೆಯಾಗುತ್ತದೆ ಎಂದು ಸಾಬೀತುಪಡಿಸುತ್ತವೆ. ಈ ನಿಟ್ಟಿನಲ್ಲಿ ನಾವು ಸಾಮೂಹಿಕ ಪ್ರಜ್ಞೆಗೆ ನಾವು ಮಾನವೀಯತೆ, ಬಹುತ್ವ, ಸಮಾನತೆ ಮತ್ತು ಸಹೋದರತ್ವದ ಹಾದಿಯಲ್ಲಿ ನಡೆಯಬೇಕು ಎಂಬ ಸಂದೇಶವನ್ನು ಈ ದಿನ ರವಾನಿಸುತ್ತಿದೆ ಎಂದು ತಿಳಿಸಿದರು.
ಬಂಡಾಯ ಎನ್ನುವುದು ಒಂದು ಲೇಬಲ್, ಕೂಗುವುದು ಅಥವಾ ಕಿರುಚುವುದಲ್ಲ. ಅದು ಒಂದು ಜವಾಬ್ದಾರಿ. ನಾನು ಹುಟ್ಟಿನಿಂದಲೇ ಬರಹಗಾರಳಾಗಿರಲಿಲ್ಲ, ಬರವಣಿಗೆ ಒಂದು ಭೋಗವಲ್ಲ. ನೈತಿಕ ಅವಶ್ಯಕತೆಯಾಗಿದೆ. ‘ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ಮತ್ತು ಕ್ರೌರ್ಯಗಳ ವಿಚಾರದಲ್ಲಿ ತಟಸ್ಥ ಅಥವಾ ಮೌನವಾಗಿ ಬಿಟ್ಟರೆ, ಅವು ಸರಿ ಎಂದು ಆ ಕೃತ್ಯಗಳನ್ನು ದೃಢೀಕರಿಸಿದಂತಾಗುತ್ತದೆ. ಇಲ್ಲದವರ, ತುಳಿತಕ್ಕೆ ಒಳಗಾದವರ, ಮಹಿಳೆಯರ, ನೋವುಂಡವರ ಪರವಾಗಿ ದನಿ ಎತ್ತುವುದು ಮತ್ತು ಅವರ ಪರವಾಗಿ ನಿಲ್ಲುವುದು ಬಂಡಾಯದ ಬದ್ಧತೆ. ಹೀಗಾಗಿ ಮೌನ ಯಾವತ್ತಿಗೂ ನನ್ನ ಆಯ್ಕೆಯಾಗಿರಲಿಲ್ಲ.
ಎಷ್ಟೋ ಸಂದರ್ಭದಲ್ಲಿ ನೇರವಾಗಿ ಮೌನ ಮುರಿಯುವುದು ಸಾಧ್ಯವಾಗುವುದಿಲ್ಲ. ಆದರೆ, ಪ್ರತಿರೋಧವನ್ನು ತೋರಲೇಬೇಕಲ್ಲವೇ? ಇಂತಹ ಪ್ರತಿರೋಧದ ಕಿಡಿಗಳು ಬಂಡಾಯ ಸಾಹಿತ್ಯವನ್ನು ರೂಪಿಸಿದ್ದು. ನನ್ನ ಕಥೆಗಳ ಪಾತ್ರಗಳೂ ಇದಕ್ಕೆ ಹೊರತಲ್ಲ. ವ್ಯಕ್ತವೋ ಅಥವಾ ಅವ್ಯಕ್ತವೋ, ಪ್ರತಿರೋಧದಿಂದಲೇ ಅವು ರೂಪುಗೊಂಡಿವೆ ಎಂದರು,