ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಸಿಗರೇಟ್ ಹಾಗೂ ನಿಷೇಧಿತ ಮಾದಕವಸ್ತು ಕಳ್ಳಸಾಗಣೆ ಮಾಡಲು ಯತ್ನ ನಡೆಸಿದ ಆರೋಪದ ಮೇಲೆ ಜೈಲಿನ ವಾರ್ಡನ್'ನ್ನು ಬಂಧನಕ್ಕೊಳಪಡಿಸಿದ್ದಾರೆ.
ರಾಹುಲ್ ಪಾಟೀಲ್ ಎಂಬಾತ ಬಂಧನಕ್ಕೊಳಗಾದ ಜೈಲು ವಾರ್ಡನ್ ಎಂದು ಗುರುತಿಸಲಾಗಿದೆ. ಈತ ಹಿಂದಿನ ಜೂನ್‍ನಲ್ಲಿ ಬೆಳಗಾವಿ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ವರ್ಗಾವಣೆಯಾಗಿದ್ದ ಎಂದು ತಿಳಿದುಬಂದಿದೆ.
ಶುಕ್ರವಾರ(ಡಿ.5) ಸಂಜೆ ಕೆಎಸ್‍ಇಎಸ್‍ಎಫ್ ಸಿಬ್ಬಂದಿಯು ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯದ್ವಾರದ ಬಳಿ ತಪಾಸಣೆ ಮಾಡುತ್ತಿದ್ದಾಗ ಜೈಲ್ ವಾರ್ಡನ್ ರಾಹುಲ್ ಪಾಟೀಲ್ ಕರ್ತವ್ಯಕ್ಕೆ ಬಂದಿದ್ದು, ಈ ವೇಳೆ ತಪಾಸಣೆ ಮಾಡಿದಾಗ ಒಳ ಉಡುಪಿನಲ್ಲಿ ಎರಡು ಸಿಗರೇಟ್ ಪ್ಯಾಕ್‍ಗಳನ್ನು ಇಟ್ಟುಕೊಂಡಿರುವುದು ಗೊತ್ತಾಗಿದೆ.
ಈ ಬಗ್ಗೆ ಜೈಲಿನ ಅಧೀಕ್ಷರ ಪರಮೇಶ್ ಎಂಬುವರ ಗಮನಕ್ಕೆ ತರಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಘಟನೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.