ಬೆಂಗಳೂರು: 140 ಕೋಟಿ ರೂ. ವೆಚ್ಚದಲ್ಲಿ ಶಿವಾಜಿನಗರದ ರಸೆಲ್ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಮುಂದಾಗಿದೆ.
ಡೀಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್ (DPR) ಪ್ರಕಾರ, ಮಾರ್ಕೆಟ್‌ನ ಹಿಂಭಾಗದಲ್ಲಿ ಇರುವ ಮಟನ್ ಮತ್ತು ಮೀನು ವಿಭಾಗವನ್ನು ನೆಲಕ್ಕುಳಿಸಿ, ಸ್ಥಳವನ್ನು ಸಂಪೂರ್ಣವಾಗಿ ಮರು ನಿರ್ಮಾಣ ಮಾಡುವ ಯೋಜನೆಯನ್ನು ಹೊಂದಲಾಗಿದೆ ಎಂದು ತಿಳಿದುಬಂದಿದೆ.
ಮಾರುಕಟ್ಟೆ ಸಂಕೀರ್ಣವನ್ನು ಶಿವಾಜಿನಗರ ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣದೊಂದಿಗೆ ಎತ್ತರದ ಮಾರ್ಗದೊಂದಿಗೆ ಸಂಪರ್ಕಿಸಲಾಗುತ್ತದೆ.
ಮುಂಭಾಗದಲ್ಲಿ ಹಣ್ಣು ಮತ್ತು ತರಕಾರಿ ಅಂಗಡಿಗಳು ಮತ್ತು ಗಡಿಯಾರ ಗೋಪುರವನ್ನು ಹೊಂದಿರುವ ಅಸ್ತಿತ್ವದಲ್ಲಿರುವ ಪಾರಂಪರಿಕ ರಚನೆಗೆ ಯಾವುದೇ ತೊಂದರೆಯಾಗುವುದಿಲ್ಲ. ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಮಾರುಕಟ್ಟೆಯಲ್ಲಿ 470 ಕ್ಕೂ ಹೆಚ್ಚು ಅಂಗಡಿಗಳಿರಲಿವೆ. ನೆಲಮಾಳಿಗೆಯಲ್ಲಿ ಪಾರ್ಕಿಂಗ್ವ್ಯವಸ್ಥೆ ಇರಲಿದ್ದು, ಸಂಚಾರ ಸಮಸ್ಯೆ ಬಗೆಹರಿಯಲಿದೆ ಎಂದು ಎಂಜಿನಿಯರ್ ಮಾಹಿತಿ ನೀಡಿದ್ದಾರೆ.
ಮಾರುಕಟ್ಟೆಯ ಮುಂಭಾಗದಲ್ಲಿ ವಿದ್ಯುತ್, ಒಳಚರಂಡಿ ಮತ್ತು ಶೌಚಾಲಯ ಸೌಲಭ್ಯಗಳಿಲ್ಲ. ನವೀಕರಣ ಕಾಮಗಾರಿಯಲ್ಲಿ ಈ ಯೋಜನೆಯೂ ಇದೆ ಎಂದು ತಿಳಿಸಿದ್ದಾರೆ.
ಯೋಜನೆಯು ಒಮ್ಮೆ ಪ್ರಾರಂಭವಾದರೆ ಪೂರ್ಣಗೊಳ್ಳಲು 18 ರಿಂದ 24 ತಿಂಗಳುಗಳು ಸಮಯ ತೆಗೆದುಕೊಳ್ಳುತ್ತದೆ. ಅಭಿವೃದ್ಧಿ ಕಾರ್ಯವನ್ನು ಹಂತ ಹಂತವಾಗಿ ಮಾಡಲಾಗುವುದರಿಂದ, ಮಾರ್ಕೆಟ್‌ನ ಮುಂಭಾಗದ ಭಾಗವನ್ನು ತಾತ್ಕಾಲಿಕವಾಗಿ ಮಾರಾಟಗಾರರ ವಾಹನ ನಿಲುಗಡೆ ತಾಣವಾಗಿ ಉಪಯೋಗವಾಗಬಹುದು. ನಿರ್ಮಾಣ ಕಾರ್ಯಕ್ಕಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಶೀಘ್ರದಲ್ಲೇ ಟೆಂಡರ್ ಕರೆಯಲಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.