ಬೆಂಗಳೂರು: ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಬುಧವಾರ ಮತ್ತು ಗುರುವಾರ ಪೂರ್ತಿ ದಿನದ ಕಲಾಪವನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸೋಮವಾರ ಹೇಳಿದರು.
ಸುವರ್ಣಸೌಧದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 238ರಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಬಸವರಾಜ ಹೊರಟ್ಟಿ ಅವಕು ಮಾತನಾಡಿದರು.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ 157ನೇ ಅಧಿವೇಶನದಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಪ್ರತಿ ಬುಧವಾರ ಮತ್ತು ಗುರುವಾರದ ಸಂಪೂರ್ಣ ಕಲಾಪಗಳನ್ನು ಸದನವು ಮೀಸಲಿಡಲಿದೆ. ಕಳೆದ ಚಳಿಗಾಲದ ಅಧಿವೇಶನದಲ್ಲಿ 11 ಎಂಎಲ್‌ಸಿಗಳು ಸುಮಾರು 5 ಗಂಟೆ 12 ನಿಮಿಷಗಳ ಕಾಲ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ಈ ಬಾರಿಯ ಕಲಾಪಕ್ಕೆ ಇಲ್ಲಿಯವರೆಗೆ 1,649 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.
ಪ್ರತಿ ಬುಧವಾರ ಮತ್ತು ಗುರುವಾರ ನಡೆಯುವ ಇಡೀ ದಿನದ ಕಲಾಪದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಇದ್ಯಾವುದಕ್ಕು ಅವಕಾಶ ನೀಡದೇ ಕೃಷ್ಣಮೇಲ್ದಂಡೆ ಯೋಜನೆ, ಮಹಾದಾಯಿ, ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನದ ಬಗ್ಗೆ, ಅರಣ್ಯಭೂಮಿ ಅತೀಕ್ರಮಣ, ಸಂತ್ರಸ್ಥರ ಸಮಸ್ಯೆ ಹಾಗೂ ಪರಿಹಾರೋಪಾಯಗಳು., ಉತ್ತರ ಕರ್ನಾಟಕ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರಗಳು ಮತ್ತು ಉದ್ಯೋಗ ಸೃಷ್ಠಿಗೆ ಕ್ರಿಯಾಯೋಜನೆ ವಿಷಯಗಳ ಮೇಲೆ ಅಂದು ಇಡೀ ದಿನ ಚರ್ಚೆಗೆ ಅವಕಾಶ ನೀಡಲಾಗುವುದು. ಚರ್ಚೆ ಪೂರ್ಣವಾಗುವವರೆಗೆ ಸದನವನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಏತನ್ಮಧ್ಯೆ, ಮಂಗಳವಾರದಿಂದ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ವ್ಯವಹಾರ ಸಲಹಾ ಸಮಿತಿ ನಿರ್ಧರಿಸಿದೆ.