ಬೆಳಗಾವಿ: ರಾಜ್ಯದಲ್ಲಿ ದ್ವೇಷಭಾಷಣಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ- 2025 ಅನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದೆ.
ಇಂದು ಪ್ರಶ್ನೋತ್ತರ ಕಲಾಪದ ನಂತರ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು, ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಮಂಡಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಈ ಮಸೂದೆಯು ಒಂದು ಲಕ್ಷ ರೂ.ಗಳವರೆಗೆ ದಂಡ ಮತ್ತು ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಅವಕಾಶ ನೀಡುತ್ತದೆ. ಈ ಮಸೂದೆಯನ್ನು ಡಿಸೆಂಬರ್ 4 ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿತ್ತು.
ದ್ವೇಷ ಭಾಷಣ ಪ್ರಸರಣೆ, ಪ್ರಕಟಣೆ, ಪ್ರಚಾರ ತಡೆಯುವ ವಿಧೇಯಕ ಇದಾಗಿದ್ದು, ಯಾವುದೇ ಪೂರ್ವಾಗ್ರಹ ಪೀಡಿತ ಹಿತಾಸಕ್ತಿಯನ್ನು ಪೂರೈಸಲು, ಜೀವಂತ ಅಥವಾ ಸತ್ತ ವ್ಯಕ್ತಿ, ಅಥವಾ ವ್ಯಕ್ತಿಗಳ ಗುಂಪಿನ ವಿರುದ್ಧ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉಂಟುಮಾಡುವ ಉದ್ದೇಶದಿಂದ ಮಾಡಿದ ಭಾಷಣ, ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಯಾವುದೇ ಅಭಿವ್ಯಕ್ತಿಯನ್ನು ದ್ವೇಷ ಭಾಷಣ ಎಂದು ವರ್ಗೀಕರಿಸಲಾಗಿದೆ.
ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಅಂಗವೈಕಲ್ಯ ಅಥವಾ ಬುಡಕಟ್ಟು ಆಧಾರದ ಮೇಲೆ ಯಾವುದೇ ಪಕ್ಷಪಾತವನ್ನು ದ್ವೇಷ ಭಾಷಣ ಎಂದು ವರ್ಗೀಕರಿಸಲಾಗಿದೆ.
ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಟ 1 ವರ್ಷ ಮತ್ತು ಗರಿಷ್ಟ 7 ವರ್ಷದವರೆಗೆ ಜೈಲು ಹಾಗೂ 50 ಸಾವಿರ ರೂ ದಂಡ ವಿಧಿಸಲು ಅವಕಾಶ ನೀಡಲಾಗಿದೆ.
ಅಪರಾಧ ಪುನರಾವರ್ತನೆ ಆದರೆ ಕನಿಷ್ಟ 2 ವರ್ಷದಿಂದ ಗರಿಷ್ಠ 10 ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಬಹುದಾಗಿದೆ.
ದ್ವೇಷ ಭಾಷಣ ಮಾಡಿ ಕೇಸ್ ಬಿದ್ದರೆ ಅದು ಜಾಮೀನು ರಹಿತ ಪ್ರಕರಣವಾಗಿದ್ದು, ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರ್ ಮೂಲಕ ದ್ವೇಷ ಭಾಷಣಗಳ ವಿಚಾರಣೆ ಮಾಡಬೇಕು. ದ್ವೇಷ ಭಾಷಣಗಳ ಪ್ರಕರಣಗಳನ್ನು ಕಾರ್ಯ ನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಗಿಂತ ಕಡಿಮೆ ಇಲ್ಲದ ಯಾರೇ ಪೊಲೀಸ್ ಅಧಿಕಾರಿಯು ಮಾಹಿತಿ ಸ್ವೀಕರಿಸಿದರೆ ವಿಚಾರಣೆ ಮಾಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ.