ಬಾಗಲಕೋಟೆ: ಜಿಲ್ಲೆಯಲ್ಲಿ ಎರಡು ಟ್ರಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸಾವಿಗೀಡಾಗಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮೃತರನ್ನು ಮಲ್ಲಿಕಾರ್ಜುನ್ (22), ರೇವಣಸಿದ್ದಪ್ಪ (20) ಮತ್ತು ಸುರೇಶ್ (33) ಎಂದು ಗುರುತಿಸಲಾಗಿದ್ದು, ಗಾಯಾಳು ರಮೇಶ್ (22) ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಧೋಳ ತಾಲೂಕಿನ ಬಂಟನೂರು ಕ್ರಾಸ್ ಬಳಿ ಮಂಗಳವಾರ ತಡರಾತ್ರಿ ಈ ಅಪಘಾತ ಸಂಭವಿಸಿದ್ದು, ಸಿಮೆಂಟ್ ಸಾಗಿಸುತ್ತಿದ್ದ ವಾಹನವು ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಿಮೆಂಟ್ ತುಂಬಿದ್ದ ವಾಹನವು ಉರುಳಿಬಿದ್ದಿದ್ದು, ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಮೆಂಟ್ ತುಂಬಿದ ಟ್ರಕ್ ಚಾಲಕನೊಂದಿಗೆ ಇನ್ನೊಂದು ಟ್ರಕ್‌ನಲ್ಲಿದ್ದ ಚಾಲಕ ಮತ್ತು ಅವರ ಸಹಾಯಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ತಿಳಿಸಿದ್ದಾರೆ.
ಪೊಲೀಸರು ಜೆಸಿಬಿ ಸಹಾಯದಿಂದ ಹಾನಿಗೊಳಗಾದ ವಾಹನವನ್ನು ಮೇಲೆತ್ತಿ, ಅದರಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದರು.
ಗಂಭೀರವಾಗಿ ಗಾಯಗಳಾಗಿರುವ ಏಕೈಕ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.