ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿದ್ದು, ಟ್ರಕ್ ಚಾಲಕನೊಬ್ಬ, ರಸ್ತೆಯಲ್ಲಿ ಬೈಕ್ ಸವಾರನ ಬೆನ್ನಟ್ಟಿ ಹೋಗಿ ಲಾರಿ ಗುದ್ದಿಸಿ ಹತ್ಯೆಗೆ ಯತ್ನಿಸಿದ ಭಯಾನಕ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ 25 ವರ್ಷದ ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೈಕ್ ಸವಾರನನ್ನು ಆನೇಕಲ್‌ನ ರಾಮಸಾಗರ ನಿವಾಸಿ ಎಚ್. ಹರೀಶ್ ಎಂದು ಗುರುತಿಸಲಾಗಿದ್ದು, ಲಾರಿ ಡಿಕ್ಕಿ ಹೊಡೆದ ನಂತರ ಪೊಲೀಸರು ಮತ್ತು ದಾರಿಹೋಕರು ಆಂಬ್ಯುಲೆನ್ಸ್‌ನಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಆರೋಪಿ ಲಾರಿ ಚಾಲಕನನ್ನು ಚಂದಾಪುರ ನಿವಾಸಿ ದೇವರಾಜು ಎಂದು ಗುರುತಿಸಲಾಗಿದೆ.
ಲಾರಿ ಚಾಲಕ ನನಗೆ ಡಿಕ್ಕಿ ಹೊಡೆಯುತ್ತಾನೆ ಎಂಬ ಭಯದಿಂದ, ನಾನು ನಲ್ಲಪ್ಪ ನರ್ಸರಿ ಬಳಿಯ ರಸ್ತೆ ಹಂಪ್‌ನಲ್ಲಿ ವೇಗವನ್ನು ಕಡಿಮೆ ಮಾಡಿದೆ. ಈ ವೇಳೆ ನನ್ನನ್ನು ತಡೆದ ಟ್ರಕ್ ಚಾಲಕ ನನ್ನ ಬಳಿಗೆ ಬಂದು ನನ್ನದು ತಪ್ಪಿಲ್ಲದಿದ್ದರೂ ನನ್ನನ್ನು ಗದರಿಸಲಾರಂಭಿಸಿದನು. ಅವನು ಕೂಗುತ್ತಲೇ ಇದ್ದಾಗ, ನಾನು ಸ್ಥಳದಿಂದ ಹೊರಟುಹೋದೆ. ನಂತರ ಅವನು ನನ್ನನ್ನು ಅರ್ಧ ಕಿಲೋಮೀಟರ್ ದೂರ ಬೆನ್ನಟ್ಟಿ ಬಂದು ನನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದನು. ಪರಿಣಾಮ, ನಾನು ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದೆ," ಎಂದು ಬೈಕ್ ಸವಾರ ಹರೀಶ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಘಟನೆಯನ್ನು ಕಣ್ಣಾರೆ ಕಂಡ ಇತರ ವಾಹನ ಸವಾರರು ಮೂರು ಕಿಲೋಮೀಟರ್‌ಗೂ ಹೆಚ್ಚು ಕಾಲ ಲಾರಿಯನ್ನು ಬೆನ್ನಟ್ಟಿ ಆತನನ್ನು ಹಿಡಿದು ಸೂರ್ಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
"ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಚಾಲಕ ಮದ್ಯದ ಅಮಲಿನಲ್ಲಿ ಚಾಲನೆ ಮಾಡುತ್ತಿದ್ದನೇ ಎಂದು ಖಚಿತಪಡಿಸಿಕೊಳ್ಳಲು ಆತನ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ವಾಹನದ ದಾಖಲೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ವೈದ್ಯರು ಬೈಕ್ ಸವಾರನಿಗೆ ಸುಮಾರು ಎಂಟು ಹೊಲಿಗೆಗಳನ್ನು ಹಾಕಿದ್ದು, ಅಪಾಯದಿಂದ ಪಾರಾಗಿದ್ದಾನೆ" ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.