ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಧೈರ್ಯವಾಗಿ ಎದುರಿಸಿದ್ದೇನೆ. ನನ್ನನ್ನು ಹೆದರಿಸಲು ಬರಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್, ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಪದಾಧಿಕಾರಿ ಕಿರಣ್ ಹೆಬ್ಬಾರ್ ಎಂಬಾತನಿಗೆ ಎಚ್ಚರಿಕೆಗೆ ನೀಡಿದ್ದಾರೆ.
ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಕುರಿತು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ಡಿಕೆ ಶಿವಕುಮಾರ್ ಸಂವಾದ ನಡೆಸಿದರು. ನಿಮ್ಮ ಸೇವೆ ಮಾಡಿದರೆ ನಮಗೆ ಮತ ಹಾಕುತ್ತೀರಿ ಎಂಬುದಷ್ಟೇ ನಮ್ಮ ಆಸೆ. ಆದರೆ ವಿಷಯವನ್ನಿಟ್ಟುಕೊಂಡು ನನಗೆ ಎಚ್ಚರಿಕೆ ಕೊಡಲು ಬಂದರೆ ಅದು ನನ್ನ ಮೇಲೆ ಕೆಲಸ ಮಾಡುವುದಿಲ್ಲ. ಯಾವನೇ ಆಗಿರಲಿ, ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬರುವುದಿಲ್ಲ ಎಂದು ಹೇಳಿದರು.
ಕೆಲವರಿಗೆ ನಾನು ಯಾರೆಂದು ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಈ ದೇಶದ ಪ್ರಧಾನಿ ಮತ್ತು ಗೃಹ ಸಚಿವರಿಗೆ ಭಯಪಡದೆ ಜೈಲಿನಿಂದ ಬಂದಿದ್ದೇನೆ. ಅಂಪಾರ್ಟ್ಮೆಂಟ್ ಮಾಲೀಕ ಎಂದು ಕಿರಣ್ ಹೆಬ್ಬಾರ್ ಎಂಬಾತ ಪತ್ರ ಬರೆದು, ನಮಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ. ನಮ್ಮಲ್ಲಿ ಬಹುದೊಡ್ಡ ಮತದಾರರ ಸಮೂಹವಿದ್ದು, ಬೆಂಗಳೂರಿನ 1.30 ಕೋಟಿ ಮತದಾರರ ಮೇಲೆ ಪರಿಣಾಮ ಬೀರಬರುವ ಸಾಮರ್ಥ್ಯವಿದೆ. ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಿದೆ. ಒಂದು ವೇಳೆ ಆಡಳಿತ ಪಕ್ಷ ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಜಿಬಿಎ ಚುನಾವಣೆ ಬರುತ್ತಿದೆ ನೋಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 1.23 ಲಕ್ಷ ಅಂತರದಿಂದ ಪ್ರಸ್ತುತ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ ಅವರನ್ನು ಸೋಲಿಸಿದ್ದೇನೆ. ನಾನು ಜನರನ್ನು ಪ್ರೀತಿಸಿದ್ದರಿಂದ ಮತ್ತು ಜನರು ನನ್ನನ್ನು ಪ್ರೀತಿಸಿದ್ದರಿಂದ ನಾನು ದಾಖಲೆಯ ಅಂತರದಿಂದ ಗೆದ್ದಿದ್ದೇನೆ. ನಿಮ್ಮ ಎಚ್ಚರಿಕೆಗಳು ನನ್ನ ಮೇಲೆ ಕೆಲಸ ಮಾಡುವುದಿಲ್ಲ. ನೀವು ಇತರರೊಂದಿಗೆ ಆಟವಾಡುವಂತೆ ನನ್ನೊಂದಿಗೆ ಆಟವಾಡಲು ಸಾಧ್ಯವಿಲ್ಲ. ನಮಗೆ ನಿಮಗಿಂತ ಹೆಚ್ಚಿನ ಬೌದ್ಧಿಕ ಶಕ್ತಿ ಇದೆ. ಆದರೆ ನಾವು ಇನ್ನೂ ನೆಲದ ಮೇಲೆ ಇದ್ದೇವೆ. ಅದಕ್ಕಾಗಿಯೇ ನಾನು ನಿಮ್ಮನ್ನು ಕರೆದು ಮಾತನಾಡಿಸುತ್ತಿದ್ದೇನೆ. ಏಕೆಂದರೆ ನಿಮ್ಮ ಧ್ವನಿ ನಮ್ಮ ಧ್ವನಿಯಾಗಬೇಕೆಂದು ನಾವು ಬಯಸುತ್ತೇವೆ ಡಿಸಿಎಂ ಹೇಳಿದರು.