ನವದೆಹಲಿ: ಮತದಾನವೆಂಬ ಪವಿತ್ರ ಶಕ್ತಿ ಮೇಲೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ಆಕ್ರಮಣವಾಗುತ್ತಿದ್ದು, ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತೆಗೆ ಕರೆ ನೀಡಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನ ದಲ್ಲಿ ಮತಚೋರಿ ವಿರುದ್ಧ ನಡೆದ ಬೃಹತ್ ರಾಲಿ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಸುದೀರ್ಘ ಟ್ವಿಟ್ ಮಾಡಿದ್ದಾರೆ.
ದೆಹಲಿಯಲ್ಲಿ ನಾವು ಒಂದು ಪಕ್ಷವಾಗಿ ಅಥವಾ ಕೇವಲ ಮತದಾರರಾಗಿ ಸೇರಿರಲಿಲ್ಲ. ಭಾರತೀಯ ಗಣರಾಜ್ಯದ ರಕ್ಷಕರಾಗಿ ಸೇರಿದ್ದೆವು. ಮತದಾನದ ಹಕ್ಕು ನಮ್ಮ ಸಂವಿಧಾನದಿಂದ ಪ್ರತಿಯೊಬ್ಬ ಪೌರನಿಗೆ ನೀಡಲಾದ ಅತ್ಯಂತ ಪವಿತ್ರ ಭರವಸೆ. ಆ ಪವಿತ್ರ ಶಕ್ತಿಗೆ ಇಂದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ಆಕ್ರಮಣವಾಗುತ್ತಿದೆ. ಬಿಜೆಪಿ ಮಾಡುತ್ತಿರುವುದು ಕೇವಲ ತಾಂತ್ರಿಕ ತಪ್ಪುಗಳಲ್ಲ, ಅದು ಜನರ ಆದೇಶವನ್ನು ವ್ಯವಸ್ಥಿತವಾಗಿ ಕದಿಯುವ ಮಾರ್ಗ' ಎಂದು ಕಿಡಿಕಾರಿದ್ದಾರೆ.
'ಕದ್ದ ಮತಗಳಿಂದ ಹುಟ್ಟಿದ ಸರ್ಕಾರ ಜನ ತಾಂತ್ರಿಕವಲ್ಲ, ಅದು ಪ್ರಜಾಪ್ರಭುತ್ವವನ್ನು ಒಳಗಿಂದೊಳಗೆ ಕೊರೆಯುತ್ತದೆ. ಇಂದು ಮತಚೋರಿ ಭಾರತೀಯ ಜನತಂತ್ರಕ್ಕೆ ಬಂದಿರುವ ಅತಿ ದೊಡ್ಡ ಬೆದರಿಕೆ. ಈ ಕತ್ತಲೆಯ ಕಾಲದಲ್ಲಿ ರಾಹುಲ್ ಗಾಂಧಿಯವರು, ಕರ್ನಾಟಕ, ಹರ್ಯಾಣ, ಬಿಹಾರ ಮೊದಲಾದ ಕಡೆಗಳಲ್ಲಿ ನಡೆದಿರುವ ಅಕ್ರಮಗಳನ್ನು ಬಯಲು ಮಾಡುವ ಮೂಲಕ ಮತಚೋರಿಯು ಕೇವಲ ಆರೋಪವಲ್ಲ, ವಾಸ್ತವತೆ ಎಂಬುದನ್ನು ತೋರಿಸಿದ್ದಾರೆಂದು ಹೇಳಿದ್ದಾರೆ.
ಕರ್ನಾಟಕದಲ್ಲೇ ಮಹದೇವಪುರ ಮತ್ತು ಆಳಂದ ಕ್ಷೇತ್ರಗಳಲ್ಲಿ ಗಂಭೀರ ಅಕ್ರಮಗಳು ಬಯಲಾದವು. ಆಳಂದದಲ್ಲಿ ಸುಮಾರು 6,000 ನ್ಯಾಯಸಮ್ಮತ ಮತದಾರರನ್ನು ಅಳಿಸುವ ಪ್ರಯತ್ನ ನಡೆದಿದೆ. ಇದರ ವಿರುದ್ಧ ನಿನ್ನೆ ಚಾಜ್೯ಶೀಟ್ ಸಲ್ಲಿಕೆಯಾಗಿ ಬಿಜೆಪಿ ಮಾಜಿ ಶಾಸಕ ಮತ್ತು ಅವರ ಮಗನ ಹೆಸರುಗಳು ಬಂದಿವೆ. ಇದು ಸತ್ಯ ಮುಖ್ಯವೆಂಬುದಕ್ಕೆ ಸಾಕ್ಷಿ. ದೆಹಲಿಯ ಈ ಐತಿಹಾಸಿಕ ಕ್ಯಾಲಿಯಿಂದ ನಾನು ಪ್ರತಿಯೊಬ್ಬ ಭಾರತೀಯನಿಗೆ ಕರೆನೀಡುತ್ತೇನೆ. ನಿಮ್ಮ ಮತವನ್ನು ರಕ್ಷಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ' ಎಂದು ಕರೆ ನೀಡಿದ್ದಾರೆ.