ಬೆಂಗಳೂರು: ಬೆಂಗಳೂರು ಏರ್‌ಪೋರ್ಟ್‌ನ ಹೊಸ ಪಾರ್ಕಿಂಗ್ ನಿಯಮದ ವಿರುದ್ಧ ಟ್ಯಾಕ್ಸಿ ಚಾಲಕರು ಸಿಡಿದೆದ್ದಿದ್ದು, ಸಾದಹಳ್ಳಿ ಟೋಲ್ ಬಳಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ವಿಮಾನ ನಿಲ್ದಾಣದ ಬಳಿಯ ಸಾದಹಳ್ಳಿ ಗೇಟ್ ಟೋಲ್ ಪ್ಲಾಜಾ ಬಳಿ, ಒಕ್ಕೂಟದ ಸಂಸ್ಥಾಪಕ ಮತ್ತು ರಾಜ್ಯ ಅಧ್ಯಕ್ಷ ಜಿ. ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಪ್ರತಿಭಟನೆಗಳಿದಿರುವ ಕ್ಯಾಬ್ ಚಾಲಕರು ರಸ್ತೆ ತಡೆ ನಡೆಸಿದ್ದು, ಈ ವೇಳೆ ಕಲ್ಲು ತೂರಾಟವೂ ನಡೆದಿದೆ ಎಂದು ತಿಳಿದುಬಂದಿದೆ.
ಹೊಸ ದಂಡ ನೀತಿ ವಿರೋಧಿಸಿ ಕನ್ನಡ ಪರ ಸಂಘಟನೆ ಮತ್ತು ಏರ್ಪೋರ್ಟ್ ಟ್ಯಾಕ್ಸಿ ಚಾಲಕರು ಸಾದಹಳ್ಳಿ ಬಳಿ ಟೋಲ್ ತಡೆದು ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆ ಜೋರಾಗುತ್ತಿದ್ದಂತೆ ನಾರಾಯಣಸ್ವಾಮಿ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮಾತಾಡಿದ ಚಾಲಕರ ಸಂಘದ ನಾರಾಯಣಸ್ವಾಮಿ ಅವರು, ಡಿಸಿಪಿ ಮಧ್ಯಸ್ತಿಕೆ ವಹಿಸಿದ್ದಾರೆ. 17 ವರ್ಷದಿಂದ ಸುದೀರ್ಘ ಸೇವೆ ಮಾಡುತ್ತಿದ್ದೇವೆ. ಸೈಡ್ ಪಿಕ್ ಅಪ್ ನಿಂದ ತೊಂದರೆ ಆಗುತ್ತಿದೆ. ನಾವು ಯಾವ ರೀತಿ ತೊಂದರೆ ಕೊಟ್ಟಿಲ್ಲ. ಇದೆಲ್ಲಾ ಬಿಐಎಎಲ್ ಅವರ ಕುತಂತ್ರ ಡಿಸಿಪಿ ಅವರು 2 ದಿನದ ಕಾಲಾವಕಾಶ ಕೇಳಿದ್ದಾರೆ. ನಾವು 4 ದಿನ ತಡೆಯುತ್ತೇವೆ. ಆಗಲೂ ಬಗ್ಗಲಿಲ್ಲ ಎಂದರೆ, ಉಪವಾಸ ಸತ್ಯಾಗ್ರಹ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ಪ್ರತಿಭಟನಾನಿರತ ಚಾಲಕರನ್ನು ಚದುರಿಸಲು ಯತ್ನಿಸಿದ್ದು, ಲಾಠಿ ಚಾರ್ಜ್ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಯಲ್ಲೋ ಬೋರ್ಡ್ ಗಳಿಗೆ ದಂಡ ಪ್ರಯೋಗಕ್ಕೆ ಮುಂದಾಗಿರುವ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ನಿಲುಗಡೆ ಸ್ಥಳಗಳಲ್ಲಿ 8 ನಿಮಿಷದವರೆಗೆ ಕಾಯಬಹುದು. ಬಳಿಕ 8 ರಿಂದ 13 ನಿಮಿಷದ ವರೆಗೆ ವಾಹನ ನಿಲ್ಲಿಸಿದರೆ 150 ರೂ ದಂಡ ವಿಧಿಸುವುದು. 13 ರಿಂದ 18 ನಿಮಿಷದ ವರೆಗೆ ಕ್ಯಾಬ್ ನಿಲ್ಲಿಸಿದರೆ 300 ರೂ ದಂಡ ಹಾಕುವುದಾಗಿ ಹಾಗೂ ಇನ್ನೂ ನಿರ್ಲಕ್ಷ್ಯ ತೋರಿದವರ ವಾಹನ ಟೋಯಿಂಗ್ ಮಾಡುವುದಾಗಿ ನಿಯಮ ಜಾರಿಗೆ ತಂದಿದೆ.
ಈ ನಡುವೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ನಿರ್ವಹಿಸುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿಕೆ ನೀಡಿದ್ದು, ಹೊಸ ನಿಯವು ಪ್ರಯಾಣಿಕರಿಗೆ ಸುರಕ್ಷಿತ, ಸುಗಮ ಮತ್ತು ಉತ್ತಮ ಅನುಭವವನ್ನು ನೀಡಲು ರೂಪಿಸಲಾಗಿದೆ.
"ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ, ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯು ನಮ್ಮ ಪ್ರಮುಖ ಆದ್ಯತೆಗಳಾಗಿವೆ. ದೈನಂದಿನ ಪ್ರಯಾಣಿಕರು ಮತ್ತು ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಸಂಚಾರ ದಟ್ಟಣೆ, ಅಸುರಕ್ಷಿತ ನಿಲುಗಡೆಗಳು ಮತ್ತು ಗೊಂದಲಗಳನ್ನು ತಡೆಗಟ್ಟಲು ಆಗಮನದ ಪಿಕಪ್ ಪ್ರದೇಶಗಳಲ್ಲಿ ಹೆಚ್ಚಿನ ಶಿಸ್ತು ಮತ್ತು ನಿಯಮಗಳನ್ನು ತರುವುದು ಅಗತ್ಯವಾಗಿದೆ ಎಂದು ಹೇಳಿದೆ.
ಟರ್ಮಿನಲ್ 1 ಮತ್ತು ಟರ್ಮಿನಲ್ 2 ನಲ್ಲಿ ಗೊತ್ತುಪಡಿಸಿದ ಆಗಮನ ಪಿಕಪ್ ವಲಯಕ್ಕೆ ಎಲ್ಲಾ ಖಾಸಗಿ ಕಾರುಗಳಿಗೆ (ಬಿಳಿ ಬೋರ್ಡ್) ಪ್ರವೇಶ ಉಚಿತವಾಗಿರುತ್ತದೆ, ಆದಾಗ್ಯೂ, ನಿಗದಿತ ಸಮಯ ಮಿತಿಗಳನ್ನು ಮೀರಿ ವಲಯದೊಳಗೆ ದುರುಪಯೋಗಪಡಿಸಿಕೊಂಡರೆ ಅಥವಾ ಹೆಚ್ಚು ಸಮಯ ಉಳಿದರೆ ಶುಲ್ಕ ವಿಧಿಸಲಾಗುತ್ತದೆ. ವಿಮಾನ ನಿಲ್ದಾಣವು ಎಲ್ಲಾ ಬಳಕೆದಾರರಿಗೆ ಉಚಿತ ಬಳಕೆಯನ್ನು ಎಂಟು ನಿಮಿಷಗಳ ಕಾಲ (ಅಂತರರಾಷ್ಟ್ರೀಯ ಮಾನದಂಡಗಳಿಗಿಂತ ಹೆಚ್ಚಿನದು) ನೀಡುತ್ತದೆ, ಅದನ್ನು ಮೀರಿದ 8-13 ನಿಮಿಷಗಳವರೆಗೆ ರೂ. 150 ಶುಲ್ಕ ಮತ್ತು 13-18 ನಿಮಿಷಗಳವರೆಗೆ ರೂ. 300 ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಗಳಿಗಿಂತ ಹೆಚ್ಚು ಸಮಯ ಉಳಿದರೆ ಯಾವುದೇ ವಾಹನವನ್ನು ಹತ್ತಿರದ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ, ಅದಕ್ಕೆ ಅನ್ವಯವಾಗುವ ದಂಡ ಮತ್ತು ಟೋಯಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದೆ.