ಬೆಂಗಳೂರು: ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವುದು ಹೆಚ್ಚಾಗುತ್ತಿದ್ದು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಅವುಗಳ ದಟ್ಟಣೆ ಹೆಚ್ಚಾಗಿದೆ. ಪರಿಣಾಮ ಅವುಗಳ ಮಲ-ಮೂತ್ರದಿಂದ ಸೋಂಕು ಹರಡುವುದು, ಉಸಿರಾಟ ತೊಂದರೆ ಸೇರಿದಂತೆ ಶ್ವಾಸಕೋಶ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ನಿಯಂತ್ರಣ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಹೊಸ ನಿಯಮದಂತೆ ನಿಯಮ ಉಲ್ಲಂಘಿಸಿ ಪಾರಿವಾಳಗಳಿಗೆ ಆಹಾರ ನೀಡಿದವರಿಗೆ, ಸಾಂಕ್ರಾಮಿಕ ರೋಗ ಹರಡಿದ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗುತ್ತದೆ. ಅವರಿಗೆ ದಂಡ ಹಾಗೂ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಯಾವುದೇ ವ್ಯಕ್ತಿಯು ಸಾರ್ವಜನಿಕರಿಗೆ ತೊಂದರೆ ಅಥವಾ ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡುವ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಬಾರದು ಅಥವಾ ಆಹಾರವನ್ನು ನೀಡಲು ಪ್ರೇರೇಪಿಸಬಾರದು. ಪಾರಿವಾಳಗಳಿಗೆ ಆಹಾರವನ್ನು ನೀಡುವುದನ್ನು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಷರತ್ತುಗಳೊಂದಿಗೆ ಅನುಮತಿಸಲಾಗುತ್ತದೆ. ನಿಗದಿಪಡಿಸಿದ ಪ್ರದೇಶಗಳ ನಿರ್ವಹಣೆ ಮತ್ತು ನಿರ್ದೇಶನಗಳ ಅನುಸರಣೆಯ ಜವಾಬ್ದಾರಿಯನ್ನು ಕೆಲವು ಎನ್‌ಜಿಓ ವಹಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಅನಿಯಂತ್ರಿತವಾಗಿ ಆಹಾರ ನೀಡುವುದರಿಂದ ಪಕ್ಷಿಗಳು ದೊಡ್ಡ ಪ್ರಮಾಣದಲ್ಲಿ ಗುಂಪು ಸೇರುತ್ತಿದ್ದು, ಅತಿಯಾದ ಹಿಕ್ಕೆಗಳು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಹೇಳಿದೆ.
ಪಾರಿವಾಳದ ಹಿಕ್ಕೆಗಳು ಮತ್ತು ಗರಿಗಳಿಂದ ಶ್ವಾಸಕೋಶದ ಕಾಯಿಲೆಗಳಾದ ಅತಿಸಂವೇದನಾ ನ್ಯುಮೋನಿಟಿಸ್ ಮತ್ತು ಇತರ ಶ್ವಾಸಕೋಶದ ಕಾಯಿಲೆಗಳು ಹೆಚ್ಚುತ್ತಿವೆ.
ತಜ್ಞರ ವೈದ್ಯಕೀಯ ಅಭಿಪ್ರಾಯ ಮತ್ತು ವರದಿಗಳು ಸೂಚಿಸುವಂತೆ,ಪಾರಿವಾಳದ ಹಿಕ್ಕೆಗಳು ಮತ್ತು ಗರಿಗಳ ಸಂಪರ್ಕದಿಂದ ಶ್ವಾಸಕೋಶದ ಹಾನಿಗೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಮೊದಲೇ ಉಸಿರಾಟದ ಸಮಸ್ಯೆ ಇರುವ ದುರ್ಬಲ ವ್ಯಕ್ತಿಗಳಲ್ಲಿ ಈ ಅಪಾಯ ಹೆಚ್ಚಿರುತ್ತದೆ. ಹೀಗಾಗಿ, ಪಾರಿವಾಳಗಳ ಹಿಕ್ಕೆಗಳು ಮತ್ತು ಗರಿಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರ ಬಗ್ಗೆ ನಗರ ಪಾಲಿಕೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.