ಬೆಂಗಳೂರು: ರಾಜಧಾನಿಯ ಬೆಂಗಳೂರಿನ ಕಸದ ಸಮಸ್ಯೆಗೆ ಸಂಬಂಧಿಸಿದಂತೆ ನಟಿ ಐಂದ್ರಿತಾ ರೇ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರನ್ನು ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟಿ ಐಂದ್ರಿತಾ ರೇ ಅವರು ಆರ್ ಆರ್ ನಗರದ ಐಡಿಯಲ್ ಹೋಮ್ ಲೇಔಟ್ನಲ್ಲಿ ವಾಸವಾಗಿದ್ದು, ಜಿಬಿಎ ಸಿಬ್ಬಂದಿ ಲೇಔಟ್ನ ಸುತ್ತಮುತ್ತ ಕಸ ಕ್ಲೀನ್ ಮಾಡಿ ಅದಕ್ಕೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.
ಸುಟ್ಟ ಕಸದ ಹೊಗೆಯಿಂದ ಮನೆಯಲ್ಲಿ ಇರೋಕೆ ಆಗ್ತಿಲ್ಲ. ಉಸಿರಾಡಲು ಆಗುತ್ತಿಲ್ಲ. ಕಸ ಸುಟ್ಟ ಹೊಗೆ ಮನೆಯೊಳಗೆ ಬರ್ತಿದೆ. ರೆಸಿಡೆನ್ಶಿಯಲ್ ಜಾಗದಲ್ಲಿ ಈ ರೀತಿ ಯಾಕೆ ಮಾಡ್ತಿದ್ದಾರೆ ಎಂದು ನಟಿ ಕಿಡಿ ಕಾರಿದ್ದಾರೆ.
ಜಿಬಿಎ ಕಂಟ್ರೋಲ್ ರೂಂಗೆ ಫೋನ್ ಮಾಡಿದ್ರು ನೋ ರೆಸ್ಪಾನ್ಸ್. ಜಿಬಿಎ ಹೆಲ್ಫ್ ಲೈನ್ ಗೆ ಕಾಲ್ ಮಾಡಿದ್ರೆ ನಂಬರ್ ಸ್ಥಗಿತವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸಹಾಯ ಮಾಡಿ ಎಂದು ವಿಡಿಯೋ ಮಾಡಿ ಶಾಸಕ ಮುನಿರತ್ನ ಅವರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.
ನಮ್ಮ ಅಪಾರ್ಟ್ಮೆಂಟ್ ಸಮೀಪದಲ್ಲೇ ಇರುವ ಖಾಲಿ ಜಾಗದಲ್ಲಿ ಕಸವನ್ನು ಸುಡುತ್ತಿದ್ದಾರೆ. ಇದ್ರಿಂದ ಅಪಾರ್ಟ್ಮೆಂಟ್ಗೆ ಹೊಗೆ ಸುತ್ತಿಕೊಳ್ಳುತ್ತಿದೆ. ಇದರ ಎಫೆಕ್ಟ್ ಮೂರು ದಿನದಿಂದ ಇದ್ದು, ಉಸಿರಾಟದ ಸಮಸ್ಯೆ ಎದುರಾಗಿದೆ ಎಂದು ಐಂದ್ರಿತಾ ಹೇಳಿದ್ದಾರೆ.