ಬೆಳಗಾವಿ: ಫೆಬ್ರವರಿ-ಮಾರ್ಚ್ ತಿಂಗಳ ಗೃಹಲಕ್ಷ್ಮಿ ಖಾತೆ ಹಣವನ್ನು ಫಲಾನುಭವಿಗಳ ಖಾತೆಗೆ ಸರ್ಕಾರ ಹಾಕಿಲ್ಲ ಎಂದು ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ತೀವ್ರ ಚರ್ಚೆಯಾಗಿತ್ತು.
ವರ್ಷಾಂತ್ಯದಲ್ಲಿ ಅದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಹಿಸುದ್ದಿ ಕೊಟ್ಟಿದ್ದಾರೆ. ನಾಳೆ ಸೋಮವಾರದಿಂದ ಶನಿವಾರದ ಒಳಗಡೆ 24ನೇ ಕಂತು ಬಿಡುಗಡೆ ಆಗುತ್ತದೆ ಎಂದು ತಿಳಿಸಿದ್ದಾರೆ
ಬೆಳಗಾವಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿದೆ. ಮುಂದಿನ ವಾರ ಹಣ ಬಿಡುಗಡೆ ಆಗುತ್ತದೆ ಎಂದರು.
ಮೃತಪಟ್ಟವರ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಣಕ್ಕೆ ಬ್ರೇಕ್
ಮೃತರ ಖಾತೆಗೂ ಇಷ್ಟು ದಿನ ಮಾಹಿತಿ ಕೊರತೆಯಿಂದ ಗೃಹಲಕ್ಷ್ಮೀ ಯೋಜನೆ ಹಣ ಸಂದಾಯವಾಗುತ್ತಿತ್ತು, ಇದು ಗಮನಕ್ಕೆ ಬಂದ ಮೇಲೆ ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಎರಡು ಬಾರಿ ಸಭೆ ಮಾಡಲಾಗಿದೆ. ಮೃತಪಟ್ಟವರ ಅಕೌಂಟ್ಗೆ ಹಣ ಸಂದಾಯವಾದರೆ ತಕ್ಷಣ ಗೊತ್ತಾಗಲ್ಲ. ಈಗ ಸಾಫ್ಟ್ವೇರ್ ಅಭಿವೃದ್ಧಿ ಅಳವಡಿಕೆ ಮಾಡಿದ್ದೇವೆ. ಮರಣ ಪ್ರಮಾಣ ಪತ್ರಗಳನ್ನು ಅಂಗನವಾಡಿ ಕಾರ್ಯಕರ್ತರು ಪರಿಶೀಲನೆ ಮಾಡುತ್ತಾರೆ. ಹೀಗಾಗಿ ಅದನ್ನು ಸದ್ಯಕ್ಕೆ ತಡೆಹಿಡಿದಿದ್ದೇವೆ. ತಪ್ಪಾಗಿ ಸಂದಾಯವಾಗಿರುವ ಹಣವನ್ನು ವಾಪಸ್ ಪಡೆಯುವ ಹೊಣೆಗಾರಿಕೆಯನ್ನು ಕೆಲ ಬ್ಯಾಂಕ್ಗೆ ಸೂಚನೆ ಕೊಟ್ಟಿದ್ದೇವೆ. ಮುಖ್ಯ ಕಾರ್ಯದರ್ಶಿಗಳು ಬ್ಯಾಂಕ್ಗೆ ಪತ್ರ ಬರೆದಿದ್ದಾರೆ ಎಂದು ಸಚಿವೆ ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ 19 ತಾಲೂಕುಗಳು ಆಗುವ ಸಾಧ್ಯತೆ
ಬೆಳಗಾವಿ ಜಿಲ್ಲಾ ವಿಭಜನೆ ಕೂಗಿನ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, ಸಿಎಂ ಮನಸ್ಸಿನಲ್ಲಿ ಜಿಲ್ಲೆ ವಿಭಜನೆ ಮಾಡಬೇಕು ಅನ್ನೋದು ಇದೆ. ಆಡಳಿತಾತ್ಮಕ, ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ವಿಭಜನೆ ಆಗಬೇಕಿದೆ. ಬೆಳಗಾವಿ ತಾಲೂಕಿನಲ್ಲಿ ಹನ್ನೊಂದೂವರೆ ಲಕ್ಷ ಜನಸಂಖ್ಯೆ ಇದೆ. ಇಷ್ಟು ಜನಸಂಖ್ಯೆಗೆ ಒಬ್ಬ ತಹಶೀಲ್ದಾರ್ ಬಹಳ ತೊಂದರೆ ಆಗುತ್ತದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 19 ತಾಲೂಕುಗಳು ಆಗುವ ಸಾಧ್ಯತೆ ಇದೆ. ಜಿಲ್ಲೆ ವಿಭಜನೆ ಘೋಷಣೆ ಮಾಡುವ ಮನಸ್ಸಿನಿಂದಲೇ ಸಿಎಂ ಬಂದಿದ್ದರು. ಬಹಳಷ್ಟು ಜನರು ನಿಯೋಗ ಬಂದಿದ್ದರಿಂದ ಚಿಂತನೆ ಮಾಡಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.