ಬೆಂಗಳೂರು: ರಾಜ್ಯ ವಿಧಾನಮಂಡಲ ಚಳಿಗಾಳ ಅಧಿವೇಶನ ಪೂರ್ಣಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ಬಜೆಟ್ ಮಂಡನೆಗೆ ಸಿದ್ಧತೆಗೆ ಮುಂದಾಗಿದ್ದು, 2026–27ನೇ ಸಾಲಿನ ಹಣಕಾಸು ವರ್ಷದಲ್ಲಿ ರಾಜ್ಯದ ಬಜೆಟ್ ಗಾತ್ರವು ರೂ.4.7 ಲಕ್ಷ ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಇದರೊಂದಿಗೆ ರಾಜ್ಯ ಸರ್ಕಾರದ ಒಟ್ಟು ಸಾಲ ಮೊತ್ತವು ರೂ.1.3 ಲಕ್ಷ ಕೋಟಿ ಮೀರಬಹುದು ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಸಿದ್ಧತೆಗಳನ್ನು ಆರಂಭಿಸಿದ್ದು, ಆದಾಯ ಸಂಗ್ರಹಿಸುವ ಇಲಾಖೆಗಳೊಂದಿಗೆ ಸಭೆ ನಡೆಸಲು ತಯಾರಿ ನಡೆಸಿದ್ದಾರೆ.
ಚಳಿಗಾಲದ ಅಧಿವೇಶನ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಅಬಕಾರಿ, ವಾಣಿಜ್ಯ ತೆರಿಗೆ ಸೇರಿದಂತೆ ಪ್ರಮುಖ ಆದಾಯ ಇಲಾಖೆಗಳ ಕಾರ್ಯಕ್ಷಮತೆ ಕುರಿತು ಮುಖ್ಯಮಂತ್ರಿ ಪರಿಶೀಲನೆ ನಡೆಸಲಿದ್ದಾರೆ.
ಪ್ರಸ್ತುತ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ಆದಾಯ ಗುರಿಯನ್ನು ತಲುಪುವಂತೆ ಇಲಾಖೆಗಳ ಮೇಲೆ ಒತ್ತಡವಿದ್ದು, ಬಜೆಟ್ ಗಾತ್ರದ ಕುರಿತ ಅಂತಿಮ ಚಿತ್ರಣವು ಜನವರಿ ಅಂತ್ಯದ ವೇಳೆಗೆ ಸ್ಪಷ್ಟವಾಗಿ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ ರಾಜ್ಯ ಸರ್ಕಾರವು ರೂ.4.09 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿತ್ತು. 2024–25ನೇ ಹಣಕಾಸು ವರ್ಷದಲ್ಲಿ ಬಜೆಟ್ ಮೊತ್ತ ರೂ.3.71 ಲಕ್ಷ ಕೋಟಿ ಆಗಿತ್ತು. 2025–26ರಲ್ಲಿ ರಾಜ್ಯವು ರೂ.1.16 ಲಕ್ಷ ಕೋಟಿ ಸಾಲ ಪಡೆದಿದ್ದು, ಇದು ಹಿಂದಿನ ವರ್ಷಕ್ಕಿಂತ ರೂ.9,000 ಕೋಟಿ ಹೆಚ್ಚಳವಾಗಿದೆ.
2025–26ರ ಬಜೆಟ್‌ನಲ್ಲಿ ರೂ.4 ಲಕ್ಷ ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಇದರಲ್ಲಿ ರೂ.1.4 ಲಕ್ಷ ಕೋಟಿ ವೇತನ ಮತ್ತು ಪಿಂಚಣಿಗಳಿಗೆ ಮೀಸಲಿಡಲಾಗಿದೆ. ಜೊತೆಗೆ, ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ರೂ.60,000 ಕೋಟಿಗೂ ಹೆಚ್ಚು ಮೊತ್ತವನ್ನು ಕಾಯ್ದಿರಿಸಿದೆ.
ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ, ಗುತ್ತಿಗೆದಾರರಿಗೆ ಬಾಕಿ ಪಾವತಿ ಹಾಗೂ ಆಡಳಿತಾತ್ಮಕ ವೆಚ್ಚಗಳಿಂದ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ಉಂಟಾಗಿದೆ. ಶಾಸಕರಿಂದ ಅಭಿವೃದ್ಧಿ ಕಾಮಗಾರಿಗಳ ಬೇಡಿಕೆಯೂ ಹೆಚ್ಚಿದ್ದು, ಹೆಚ್ಚಿನ ಸಾಲ ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತೆರಿಗೆ ಆದಾಯದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿರುವ ಜಿಎಸ್‌ಟಿ ದರ ಕಡಿತದ ಬಗ್ಗೆ ಸಿದ್ದರಾಮಯ್ಯ ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಕೇಂದ್ರವು ರಾಜ್ಯಗಳಿಗೆ ಆಗಿರುವ ನಷ್ಟವನ್ನು ಸರಿದೂಗಿಸಬೇಕು ಎಂದು ಒತ್ತಾಯಿಸಿದ್ದರು.