ಚಾಮರಾಜನಗರ: ನಂಜೇದೇವನಪುರ ಗ್ರಾಮದ ಬಳಿ 5 ಹುಲಿ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲೆಯ ನಂಜೇದೇವನಪುರ, ವೀರನಪುರ ಹಾಗೂ ಉಡಿಗಾಲ ಗ್ರಾಮದ ಜಮೀನುಗಳಲ್ಲಿ ಹುಲಿಗಳು ಓಡಾಟ ಹೆಚ್ಚಿದೆ. ಹೀಗಾಗಿ ಈ ಪ್ರದೇಶಗಳಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಂಜೆದೇವಪುರ ಗ್ರಾಮದ ಬಳಿ ಬರೋಬ್ಬರಿ ಐದು ಹುಲಿಗಳು ಒಟ್ಟಿಗೆ ಪ್ರತ್ಯಕ್ಷವಾಗಿದ್ದು, ಸದ್ಯ ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಂಜೆದೇವಪುರ ಸೇರಿ ಮೂರು ಗ್ರಾಮಗಳಲ್ಲಿ ಇಂದಿನಿಂದ ನಾಳೆ ಸಂಜೆ 6ರವರೆಗೂ 144 ಸೆಕ್ಷನ್ ಜಾರಿ ಮಾಡಿ ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಆದೇಶ ಹೊರಡಿಸಿದ್ದಾರೆ.
ಡ್ರೋನ್‌ನಲ್ಲೂ 5 ಹುಲಿಗಳು ಓಡಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಹೀಗಾಗಿ ಸಾಕಾನೆಗಳಿಂದ ಕೂಂಬಿಂಗ್‌ಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಿಂತು ಹೋದ ಕ್ವಾರಿಗಳನ್ನೇ ಟೈಗರ್ ಆವಾಸ ಸ್ಥಾನ ಮಾಡಿಕೊಂಡಿದ್ದು, ಹುಲಿಗಳನ್ನು ಸೆರೆಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.
ಸದ್ಯ ಶಾಸಕ ಪುಟ್ಟರಂಗಶೆಟ್ಟಿ ಖುದ್ದು ಅರಣ್ಯ ಸಿಬ್ಬಂದಿಯ ಜೊತೆ ಪರಿಶೀಲನೆ ಕಾರ್ಯ ನಡೆಸಿದ್ದಾರೆ. ಅರಣ್ಯ ಸಿಬ್ಬಂದಿಯ ಜೊತೆ ಪರಿಶೀಲನೆ ವೇಳೆ ಡ್ರೋನ್ ಕ್ಯಾಮೆರಾದಲ್ಲಿ ಕಲ್ಲು ಕ್ವಾರಿಯ ಜಾಗದಲ್ಲಿ ತಾಯಿ ಹುಲಿ ಹಾಗೂ ಮರಿಹುಲಿಗಳ ಪಗ್ ಮಾರ್ಕ್ ಪತ್ತೆ ಆಗಿದೆ. ಇದೇ ಕಲ್ಲು ಕ್ವಾರಿಯಲ್ಲಿ 5 ಹುಲಿಗಳು ಬೀಡು ಬಿಟ್ಟಿವೆ.