ಬೀದರ್: ಕಾಂಗ್ರೆಸ್ ಪಕ್ಷವು ಮಹಾತ್ಮಾ ಗಾಂಧೀಜಿಯವರನ್ನು ದೈಹಿಕವಾಗಿ ಅಲ್ಲದಿದ್ದರೂ, ಸೈದ್ಧಾಂತಿಕವಾಗಿ ಹಲವಾರು ಬಾರಿ ಕೊಲೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ವಿಸರ್ಜಿಸಲು ಗಾಂಧಿ ಹೇಳಿದ್ದರು. ಆದರೆ ಅಧಿಕಾರದ ಆಸೆಗೆ ನೆಹರೂ ಅದನ್ನು ಮುಂದುವರಿಸುವ ಮೂಲಕ ಗಾಂಧಿ ಆಶಯವನ್ನು ಅಂದೇ ಕೊಲೆ ಮಾಡಿದರು. ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತೆಗೆದು ಹಾಕುವ ಮೂಲಕ ಮತ್ತೊಮ್ಮೆ ಗಾಂಧಿ ಸಿದ್ಧಾಂತವನ್ನು ಕೊಂದರು ಎಂದು ಕಿಡಿಕಾರಿದರು.
ರಾಮ ಬೇರೆಯಲ್ಲ, ಮಹಾತ್ಮ ಗಾಂಧಿ ಬೇರೆಯಲ್ಲ. ಗಾಂಧಿ ಅವರ ಆತ್ಮ ರಾಮನ ಹೆಸರು ಹೇಳುತ್ತದೆ. ಗಾಂಧಿ ತಮ್ಮ ಕೊನೆ ಗಳಿಗೆಯಲ್ಲಿ ಅದೇ ಹೆಸರು ಹೇಳಿದ್ದರು. ರಾಮನ ವಿಚಾರವನ್ನೇ ಗಾಂಧೀಜಿ ಅವರು ಅವರ ಜೀವನದುದ್ದಕ್ಕೂ ಪ್ರತಿಪಾದಿಸಿದ್ದರು.
ಗ್ರಾಮ ರಾಜ್ಯ ರಾಮ ರಾಜ್ಯ ಎಂದು ಹೇಳಿದ್ದರು. ಮಹಾತ್ಮ ಗಾಂಧಿ ಅಂತರಾತ್ಮದಲ್ಲಿರುವ ಹೆಸರನ್ನೇ ನಾವು ಉದ್ಯೋಗ ಖಾತ್ರಿ ಯೋಜನೆಗೆ ‘ವಿಬಿ–ಜಿ ರಾಮ್ ಜಿ’ಎಂಬುದಾಗಿ ಮಾಡಿದ್ದೇವೆ ಎಂದು ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡರು.
ಮಹಾತ್ಮ ಗಾಂಧಿಯವರಿಗೆ ಎಂದಿಗೂ ಅಷ್ಟೇ ಗೌರವ ಇದೆ. ಕಾಂಗ್ರೆಸ್ಸಿನವರು ಚುನಾವಣೆ ಬಂದಾಗ ರಾಜಕೀಯವಾಗಿ ಗಾಂಧಿ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಗಾಂಧಿ ಹೆಸರಿನ ಲಾಭ ಪಡೆದವರು ಈಗಿನ ಗಾಂಧಿ ಕುಟುಂಬದವರು. ಅದೆಲ್ಲ ಹೋಗಿ ಬಿಡುತ್ತದೆ ಎಂಬ ಭಯ ಅವರಿಗೆ ಕಾಡುತ್ತಿದೆ ಎಂದು ಕುಟುಕಿದರು.
ಕಾಯ್ದೆಯಿಂದ ಆಸ್ತಿ ಸೃಷ್ಟಿಯಾಗಬೇಕು. ಇದಕ್ಕಾಗಿ ಹಲವಾರು ಹೊಸ ಬದಲಾವಣೆ ತಂದಿದ್ದೆವೆ. 100 ದಿನಗಳ ಕೂಲಿ ಹಣವನ್ನು ಸಂಪೂರ್ಣ ಕೇಂದ್ರ ಸರ್ಕಾರ ಕೊಡುತ್ತದೆ. ಹೆಚ್ಚುವರಿ 25 ದಿನಗಳದ್ದು ರಾಜ್ಯ ಸರ್ಕಾರ ಕೊಡಬೇಕೆಂದು ಬದಲಾವಣೆ ಮಾಡಲಾಗಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಕೊಟ್ಟು ಜನಸಾಮಾನ್ಯರಿಗೆ, ಬಡವರಿಗೆ ಕೂಲಿ ಕೊಡಲು ಹಿಂದೇಟು ಹಾಕುತ್ತಿದೆ. ಇವರು ಯಾರ ಪರವಾಗಿ ಇದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದರು