ಮೈಸೂರು: ಮಾನವ-ಪ್ರಾಣಿ ಸಂಘರ್ಷಗಳು ಗಂಭೀರ ಸವಾಲನ್ನು ಒಡ್ಡುತ್ತಲೇ ಇವೆ, ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನದಲ್ಲಿ ವನ್ಯಜೀವಿಗಳೊಂದಿಗಿನ ಘರ್ಷಣೆ ಪ್ರಕರಣಗಳಲ್ಲಿ ಶೇ. 60 ರಷ್ಟು ಮಾನವರ ಸಾವು ಸಂಭವಿಸಿವೆ.
2022 ರಿಂದ 2025 ರವರೆಗೆ (ನವೆಂಬರ್ 30) ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷದಲ್ಲಿ 203 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 2022-23 ರಲ್ಲಿ 58 ಜನರು, 2023-24 ರಲ್ಲಿ 65 ಮಂದಿ, 2024-25 ರಲ್ಲಿ 46 ಮತ್ತು 2025 ರ ನವೆಂಬರ್ ವರೆಗೆ 34 ಜನ ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.
ನಾಲ್ಕು ವರ್ಷಗಳಲ್ಲಿ 40 ಸಾವುಗಳೊಂದಿಗೆ, ಚಾಮರಾಜನಗರ ಜಿಲ್ಲೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಕೊಡಗು 32 ಸಾವು, ಮೈಸೂರು 25 ಮತ್ತು ಹಾಸನ 19 ಸಾವುಗಳೊಂದಿಗೆ ನಂತರದ ಸ್ಥಾನದಲ್ಲಿದೆ. ದಕ್ಷಿಣ ಕರ್ನಾಟಕದ ಅರಣ್ಯಗಳ ಅಂಚಿನ ಪ್ರದೇಶಗಳಿಂದ ಉಂಟಾಗುವ ಅಸಮಾನ ಪರಿಣಾಮವನ್ನು ಅಂಕಿಅಂಶವು ಎತ್ತಿ ತೋರಿಸಿದೆ, ಅಲ್ಲಿ ಮಾನವ ವಸಾಹತುಗಳು ವನ್ಯಜೀವಿಗಳ ಆವಾಸಸ್ಥಾನಗಳೊಂದಿಗೆ ಹೆಚ್ಚಾಗಿ ಅತಿಕ್ರಮಿಸುತ್ತವೆ.
ಈ ಜಿಲ್ಲೆಗಳು ದಕ್ಷಿಣ ಭಾರತದ ಅತಿದೊಡ್ಡ ಅರಣ್ಯ ಪ್ರದೇಶಗಳಾದ ಬಂಡೀಪುರ-ನಾಗರಹೊಳೆ-ವಯನಾಡು-ಮುದುಮಲೈ ಸೇರಿದಂತೆ ಪರಿಸರ ಸೂಕ್ಷ್ಮ ವಲಯಗಳೊಂದಿಗೆ ವ್ಯಾಪಕ ಗಡಿಗಳನ್ನು ಹಂಚಿಕೊಂಡಿವೆ.
ಕುಗ್ಗುತ್ತಿರುವ ಅರಣ್ಯ ಕಾರಿಡಾರ್‌ಗಳು, ಕೃಷಿ ವಿಸ್ತರಣೆ ಮತ್ತು ವನ್ಯಜೀವಿ ಆವಾಸಸ್ಥಾನಗಳಲ್ಲಿ ಮಾನವ ಅತಿಕ್ರಮಣದಂತಹ ಅಂಶಗಳಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ವನ್ಯಜೀವಿ ಕಾರಿಡಾರ್‌ಗಳ ಪುನಃಸ್ಥಾಪನೆ, ವೈಜ್ಞಾನಿಕ ಭೂ-ಬಳಕೆ ಯೋಜನೆ, ಹೆಚ್ಚು ದುರ್ಬಲ ವಸಾಹತುಗಳ ಸ್ಥಳಾಂತರ ನಿರಂತರ ಸಮುದಾಯ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ದೀರ್ಘಕಾಲೀನ ಪರಿಹಾರಗಳ ಅಗತ್ಯವಿದೆ ಎಂದು ಸಂರಕ್ಷಣಾ ತಜ್ಞರು ವಾದಿಸುತ್ತಾರೆ.
ಆನೆಗಳ ದಾಳಿಯು ಸಾವು ನೋವುಗಳಲ್ಲಿ ಗಮನಾರ್ಹ ಪಾಲನ್ನು ಹೊಂದಿದೆ, ನಂತರ ಕೆಲವು ಪ್ರದೇಶಗಳಲ್ಲಿ ಚಿರತೆಗಳು ಮತ್ತು ಹುಲಿಗಳ ದಾಳಿಯಿಂದ ಮನುಷ್ಯರ ಸಾವು ಉಂಟಾಗಿದೆ. ಜನರು ಕೃಷಿ ಹೊಲಗಳಲ್ಲಿ ಕೆಲಸ ಮಾಡುವಾಗ, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಾಗ ಅಥವಾ ಅರಣ್ಯ ಪ್ರದೇಶಗಳಲ್ಲಿ ಚಲಿಸುವಾಗ, ಹೆಚ್ಚಾಗಿ ಬೆಳಗಿನ ಜಾವ ಅಥವಾ ಸಂಜೆ ಸಮಯದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ.
ಸೌರಶಕ್ತಿ ಚಾಲಿತ ಬೇಲಿಗಳ ಸ್ಥಾಪನೆ, ಆನೆ-ನಿರೋಧಕ ಕಂದಕಗಳು, ಮುಂಜಾಗ್ರತಾ ವ್ಯವಸ್ಥೆಗಳು ಮತ್ತು ಕಮಾಂಡ್ ಸೆಂಟರ್ ಪರಿಚಯಿಸುವುದು ಸೇರಿದಂತೆ ಮಾನವ - ವನ್ಯಜೀವಿ ಸಂಘರ್ಷ ತಗ್ಗಿಸುವ ಹಲವಾರು ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ ಎಂದು ಅರಣ್ಯ ಇಲಾಖೆ ಹೇಳಿಕೊಂಡಿದೆ.
ಮಾನವ-ವನ್ಯಜೀವಿಗಳ ಸಹಬಾಳ್ವೆಯನ್ನು ಪರಿಸರ ಮತ್ತು ಸಾಮಾಜಿಕ ಹಸ್ತಕ್ಷೇಪಗಳ ಮೂಲಕ ಪರಿಹರಿಸಲಾಗುತ್ತದೆ. ಇದನ್ನು ಸರಿಯಾಗಿ ಪರಿಹರಿಸದಿದ್ದರೆ ಪ್ರಾಣಿಗಳ ಪ್ರತೀಕಾರದ ಹತ್ಯೆಯ ಜೊತೆಗೆ ಮಾನವ ಜೀವಗಳ ನಷ್ಟವು ಮುಂದುವರಿಯುವ ಸಾಧ್ಯತೆಯಿದೆ" ಎಂದು ಮಾಜಿ ವನ್ಯಜೀವಿ ವಾರ್ಡನ್ ಒಬ್ಬರು ಅಭಿಪ್ರಾಯ ಪಟ್ಟಿದ್ದಾರೆ.