ಬೆಂಗಳೂರು: ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದರೂ ಇ-ಖಾತಾಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂಬ ದೂರುಗಳು ಹೆಚ್ಚಾಗುತ್ತಿದ್ದು, ಇದರ ಬೆನ್ನಲ್ಲೇ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಂಗಳವಾರ ಹೇಳಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಅವರು ಪ್ರತಿಕ್ರಿಯೆ ನೀಡಿ, ಇ-ಖಾತಾಗಾಗಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುವುದು ಎಂದು ಹೇಳಿದರು.
ಸ್ವತ್ತು ಹೊಂದಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಇ-ಖಾತಾ ಯೋಜನೆಯನ್ನು ಪ್ರಾರಂಭಿಸಿದೆ. ಯಾರಿಗೆ ಯಾವುದಾದರೂ ಸಮಸ್ಯೆಗಳು ಎದುರಾದರೂ ಅದನ್ನು ನಾವು ಪರಿಹರಿಸುತ್ತೇವೆ ಎಂದು ತಿಳಿಸಿದರು.
ಇ-ಖಾತಾ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂಬ ದೂರು ಕುರಿತು ಮಾತನಾಡಿ, ಇದನ್ನು ಪತ್ತೆ ಮಾಡಲು ಆಡಿಟ್ ನಡೆಸಲಾಗುವುದು ಎಂದರು.
ಏತನ್ಮಧ್ಯೆ, ಇ-ಖಾತಾಗಳನ್ನು ನೀಡುವಲ್ಲಿ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಬೊಮ್ಮನಹಳ್ಳಿ ವಲಯದ ಉಪ ಆಯುಕ್ತ ಡಿ.ಕೆ. ಬಾಬು ಮತ್ತು ಕಂದಾಯ ಅಧಿಕಾರಿ (ಬಿಟಿಎಂ ಲೇಔಟ್) ವರಲಕ್ಷ್ಮಿ ಅವರನ್ನು ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಜಿಬಿಎ ಪುರಸಭೆ ಅಧಿಕಾರಿಗಳು ಮತ್ತು ನೌಕರರ ಕಲ್ಯಾಣ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಕಂದಾಯ ಇಲಾಖೆಯ ನೌಕರರನ್ನು ಆಯುಕ್ತರು ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಿದ್ದಾರೆ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕೆಲಸದ ಹೊರೆಯಿಂದಾಗಿ ಅನೇಕ ನೌಕರರು ರಾಜೀನಾಮೆ ನೀಡಲು ಚಿಂತನೆ ನಡೆಸುತ್ತಿದ್ದಾರೆಂದು ಆರೋಪಿಸಿದರು.
ಇದೇ ವೇಳೆ ಸಂಘದ ಸದಸ್ಯರು ಜಿಬಿಎ ಆಯುಕ್ತರನ್ನು ಭೇಟಿ ಮಾಡಿ ವಿಶೇಷ ಆಯುಕ್ತರ ವಿರುದ್ಧ ದೂರು ನೀಡಿದರು. ಇಬ್ಬರು ಅಧಿಕಾರಿಗಳ ಅಮಾನತು ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅಧಿಕಾರಿಗಳ ಅಮಾನತು ಆದೇಶ ರದ್ದುಪಡಿಸದಿದ್ದರೆ, ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.