ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ಬಸ್ ಅಪಘಾತ ಹೇಗಾಯಿತು ಎಂದು ಖಾಸಗಿ ಬಸ್‌ನ ಚಾಲಕ ಮಾತನಾಡಿದ್ದಾರೆ. ಅತಿ ವೇಗದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿರುವುದನ್ನು ನೋಡಿ ನನಗೆ ಬಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇಂದು ನಸುಕಿನ ಜಾವ 2 ಗಂಟೆಗೆ ಹಿರಿಯೂರು ಬಳಿ ವೇಗವಾಗಿ ಬಂದ ಕಂಟೇನರ್ ಟ್ರಕ್ ಖಾಸಗಿ ಐಷಾರಾಮಿ ಸ್ಲೀಪರ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ಐಜಿಪಿ ಡಾ. ಬಿ.ಆರ್. ರವಿಕಾಂತೇ ಗೌಡ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಅಪಘಾತ ಹೇಗಾಯಿತು?
ರಸ್ತೆ ವಿಭಜಕದ ಇನ್ನೊಂದು ಬದಿಯಿಂದ ಟ್ರಕ್ ಬಂದು ಡಿಕ್ಕಿ ಹೊಡೆದಿದೆ. ಅದು ಅತಿ ವೇಗದಲ್ಲಿ ಚಲಿಸುತ್ತಿತ್ತು. ಆ ಸಮಯದಲ್ಲಿ ನಾನು 60-70 ಕಿ.ಮೀ ವೇಗವನ್ನು ಕಾಯ್ದುಕೊಂಡಿದ್ದೆ. ವಾಹನವು ಮುಂಭಾಗದಿಂದ ಬರುತ್ತಿರುವುದನ್ನು ನಾನು ನೋಡಿದೆ. ಟ್ರಕ್ ಬಸ್‌ಗೆ ಡಿಕ್ಕಿ ಹೊಡೆದ ನಂತರ ಏನಾಯಿತು ಮತ್ತು ನನ್ನನ್ನು ಹೇಗೆ ಹೊರಗೆ ತರಲಾಯಿತು ಎಂದು ನನಗೆ ತಿಳಿದಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿರುವ ಬಸ್ ಚಾಲಕ ರಫೀಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನವನ್ನು ನೋಡಿ ನಾನು ಬಸ್ ನ್ನು ನಿಯಂತ್ರಿಸಲು ಪ್ರಯತ್ನಿಸಿದೆ. ನನ್ನ ಬಸ್ ನಮ್ಮ ಪಕ್ಕದಲ್ಲಿ ಚಲಿಸುತ್ತಿದ್ದ ಇನ್ನೊಂದು ವಾಹನಕ್ಕೂ ಡಿಕ್ಕಿ ಹೊಡೆದಿದೆ, ಅದು ಯಾವ ವಾಹನ ಎಂದು ನನಗೆ ತಿಳಿದಿಲ್ಲ. ನನಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದರು.
ಸಣ್ಣಪುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ಬಸ್ ಕ್ಲೀನರ್ ಮೊಹಮ್ಮದ್ ಸಾದಿಕ್, ಡಿಕ್ಕಿಯ ಪರಿಣಾಮವಾಗಿ ಬಸ್‌ನಿಂದ ಹೊರಗೆ ಎಸೆಯಲ್ಪಟ್ಟೆ ಎಂದಿದ್ದಾರೆ.
ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ನೇರವಾಗಿ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದಾಗ ನಾನು ಬಸ್‌ನ ಮುಂಭಾಗದಲ್ಲಿ ನಿದ್ರಿಸುತ್ತಿದ್ದೆ. ಅಪಘಾತದ ಪರಿಣಾಮ, ನಾನು ಹೊರಗೆ ಎಸೆಯಲ್ಪಟ್ಟೆ, ಬಸ್‌ನ ಗಾಜು ಒಡೆದು ಹೋಯಿತು ಎಂದು ಹೇಳಿದರು.