ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದು ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೀಬರ್ಡ್ ಟ್ರಾವೆಲ್ಸ್‌ನ ಸ್ಲೀಪರ್ ಬಸ್‌ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು.
ಈ ಹಿಂದೆ ಪ್ರಾಥಮಿಕ ತನಿಖೆಗಳನ್ನು ಉಲ್ಲೇಖಿಸಿ, ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಹೇಳಿದ್ದರು. ತದನಂತರ ಐವರು ಸಾವನ್ನಪ್ಪಿರುವುದಾಗಿ ಅವರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಒಂದು ಮಗು ಕೂಡಾ ಸಾವನ್ನಪ್ಪಿರುವುದು ತಿಳಿದುಬಂದಿದೆ. ಇದರೊಂದಿಗೆ ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಆರು ಆಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸುದ್ದಿಗಾರರಿಗೆ ತಿಳಿಸಿದರು. ಗುರುತಿಸದ ಇನ್ನೂ ಮೂವರು ಬಸ್ ನಿಂದ ಹೊರಗೆ ಜಿಗಿದು ಪ್ರಾಣ ಕಾಪಾಡಿಕೊಂಡಿರಬಹುದು ಎಂದಿದ್ದಾರೆ.
ಅಪಘಾತದಲ್ಲಿ ಬಸ್ಸಿನಲ್ಲಿದ್ದ ಐವರು ಪ್ರಯಾಣಿಕರು ಮತ್ತು ಟ್ರಕ್ ಚಾಲಕ ಸಾವನ್ನಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿಗೆ ಸಂತಾಪ ಸೂಚಿಸಿದ್ದು, ಇಬ್ಬರೂ ಮೃತರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದಾರೆ. ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಂಟೈನರ್ ಟ್ರಕ್ ಡಿವೈಡರ್ ಗೆ ಡಿಕ್ಕಿಯಾಗಿ ಎದುರುನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ರವಿಕಾಂತೇ ಗೌಡ ಸುದ್ದಿಗಾರರಿಗೆ ತಿಳಿಸಿದರು. 30 ಪ್ರಯಾಣಿಕರು ಸೇರಿದಂತೆ 32 ಮಂದಿಯಿದ್ದ ಬಸ್ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿತ್ತು.
ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಹಿರಿಯೂರು ತಾಲೂಕಿನ ಗೋಳರ್ತಿಯಲ್ಲಿ ಬಸ್ಸಿನೊಳಗೆ ಸಜೀವ ದಹನವಾಗಿದ್ದಾರೆ. ಬಸ್ ಚಾಲಕ ಮತ್ತು ಕ್ಲೀನರ್ ಅಪಘಾತದಿಂದ ಪರಾರಿಯಾಗಿದ್ದಾರೆ. ಇದುವರೆಗಿನ ತನಿಖೆಯ ಪ್ರಕಾರ, ಕಂಟೈನರ್ ಟ್ರಕ್ ಬಸ್ ನ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಡೀಸೆಲ್ ಸೋರಿಕೆಯಾಗಿ ಬೆಂಕಿ ಹೊತ್ತುಕೊಂಡಿದೆ ಎಂಬುದು ತಿಳಿದುಬಂದಿದೆ ಎಂದು ಐಜಿಪಿ ತಿಳಿಸಿದರು.
ಪೊಲೀಸರ ಪ್ರಕಾರ, ಬದುಕುಳಿದವರಲ್ಲಿ ಮೂವರು ಸ್ನೇಹಿತರು ಸೇರಿದ್ದಾರೆ. ಇನ್ನಿಬ್ಬರು ಪ್ರಯಾಣಿಕರು ಬಸ್ ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಗೊಂಡ 12 ಮಂದಿಯಲ್ಲಿ ಒಂಬತ್ತು ಮಂದಿಯನ್ನು ಸಿರಾಗೆ ಮತ್ತು ಮೂವರನ್ನು ತುಮಕೂರಿಗೆ ಸ್ಥಳಾಂತರಿಸಲಾಗಿದೆ. ಗಂಭೀರ ಸುಟ್ಟ ಗಾಯಗಳಾಗಿರುವ ರೋಗಿಗಳಲ್ಲಿ ಒಬ್ಬರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಗೌಡ ತಿಳಿಸಿದ್ದಾರೆ.
ಅಶ್ಚರ್ಯಕರ ರೀತಿಯಲ್ಲಿ ಪಾರಾದ ಶಾಲಾ ಮಕ್ಕಳು: ಅಪಘಾತಕ್ಕೀಡಾದ ಬಸ್‌ನ ಹಿಂದೆ ಇದ್ದ 42 ಶಾಲಾ ಮಕ್ಕಳಿದ್ದ ಇನ್ನೊಂದು ಬಸ್ ಅಪಘಾತದಿಂದ ಪಾರಾಗಿದೆ. ಟಿ ದಾಸರಹಳ್ಳಿಯಿಂದ ದಾಂಡೇಲಿಗೆ ತೆರಳುತ್ತಿದ್ದ ಶಾಲಾ ಮಕ್ಕಳಿದ್ದ ಬಸ್ ಬಸ್ ಹಿಂಬದಿಯಿಂದ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಇನ್ನೊಂದು ಬದಿಗೆ ಹೋಗಿದೆ. ಅದೃಷ್ಟವಶಾತ್ ಯಾರಿಗೂ ಸಣ್ಣಪುಟ್ಟ ಗಾಯವೂ ಆಗಿಲ್ಲ. ಮಕ್ಕಳು ಮತ್ತೊಂದು ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಶಾಲಾ ಬಸ್ ಚಾಲಕ ಪ್ರಮುಖ ಪ್ರತ್ಯಕ್ಷದರ್ಶಿಯಾಗಿದ್ದು, ಅವರ ಹೇಳಿಕೆಯನ್ನು ದಾಖಲಿಸಲಾಗುವುದು ಎಂದು ಅವರು ಹೇಳಿದರು.
ಅಪಘಾತಕ್ಕೀಡಾದ ಬಸ್‌ನ ಬಹುತೇಕ ಪ್ರಯಾಣಿಕರು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಅವರ ಫೋನ್ ನಂಬರ್ ಪಡೆದುಕೊಂಡಿದ್ದು, ಕುಟುಂಬಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಮೃತದೇಹಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ರವಿಕಾಂತೇಗೌಡ ತಿಳಿಸಿದರು.