ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆ ಹಳ ಎಲ್ಲೂ ಹೋಗಿಲ್ಲ. ಯೋಜನೆಯ ಹಣ ದುರ್ಬಳಕೆಯಾಗಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಸಾವಿರ ಕೋಟಿ ರೂಪಾಯಿ ಹಣ ಎಲ್ಲಾದರೂ ನಾಪತ್ತೆಯಾದರೆ ಆದಾಯ ತೆರಿಗೆ ಇಲಾಖೆಯವರು ಸುಮ್ಮನೆ ಬಿಡುತ್ತಾರೆಯೇ? ಯೋಜನೆಯ ಹಣ ದುರುಪಯೋಗವಾಗಿಲ್ಲ. ಯೋಜನೆಯ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲವಾದ್ದರಿಂದ ದುರುಪಯೋಗದ ಆರೋಪಗಳು ಅಸತ್ಯ ಹಾಗೂ ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದರು.
ಯೋಜನೆಯ ಹಣವೇ ಇನ್ನೂ ಬಿಡುಗಡೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ದುರುಪಯೋಗದ ಆರೋಪ ಮಾಡುವುದು ಜನರನ್ನು ತಪ್ಪು ದಾರಿಗೆಳೆಸುವ ಪ್ರಯತ್ನವಾಗಿದೆ. ಯೋಜನೆಯ ಹಣದ ಬಗ್ಗೆ ಇರುವ ಗೊಂದಲ ಕುರಿತು ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಮಂತ್ರಿಗಳು ಶೀಘ್ರದಲ್ಲೇ ಸ್ಪಷ್ಟೀಕರಣ ನೀಡಲಿದ್ದಾರೆ. ಬಳಿಕ ಎಲ್ಲಾ ಗೊಂದಲಗಳು ನಿವಾರಣೆಯಾಗಲಿವೆ ಎಂದು ತಿಳಿಸಿದರು.
ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರವಸೆ ನೀಡಿದ ಅವರು, ಮಹಿಳೆಯರು ಚಿಂತಿಸಬೇಕಾದ ಅಗತ್ಯವಿಲ್ಲ. ಮುಂದಿನ ಕಂತುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಬಾಕಿ ಮೊತ್ತವೂ ಅದರೊಂದಿಗೆ ಖಾತೆಗೆ ಜಮೆಯಾಗಲಿದೆ, ಸರ್ಕಾರ ಗೃಹಲಕ್ಷ್ಮಿ ಯೋಜನೆ ಮುಂದುವರೆಸಲು ಸಂಪೂರ್ಣ ಬದ್ಧವಾಗಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಂತರಿಕ ಗೊಂದಲಗಳ್ನು ನೀವು ನೀವೇ ಬಗೆಹರಿಸಿಕೊಳ್ಳಿ ಎಂದು ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಆದರೆ, ಆ ಮಾತು ನಮಗಲ್ಲ, ಅದು ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಹೈಕಮಾಂಡ್ ಅವರಿಗೆ ಹೇಳಿದ್ದಾರೆಂದು ಎಂದು ಮಾರ್ಮಿಕವಾಗಿ ನುಡಿದರು.
ಜ.25 ರಂದು ನಡೆಯಲಿರುವ ಅಹಿಂದ ಸಮಾವೇಶದ ಬಗ್ಗೆ ಮಾತನಾಡಿ, ಅಹಿಂದ ಎನ್ನುವುದು ನಮ್ಮ ಶಕ್ತಿ. ಇದನ್ನು ಮಾಡಲು ನಮಗೆ ಯಾರ ಪ್ರಮಾಣ ಪತ್ರ ಬೇಕಿಲ್ಲ. ಸಮಾವೇಶ ಯಾರೇ ಮಾಡಿದರೂ ನಮ್ಮ ಅಭ್ಯಂತರವಿಲ್ಲ ಎಂದರು.