ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳು ಮತ್ತು ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಶನಿವಾರ ಸಭೆ ನಡೆಸಿದ್ದು, ಮಾತುಕತೆ ನಡೆಸಿದ್ದಾರೆ.
ತುಷಾರ್ ಗಿರಿನಾಥ್ ಅವರು, ಇ-ಖಾತಾಯಲ್ಲಿ ಉಂಟಾಗುತ್ತಿರುವ ಸಾಫ್ಟ್‌ವೇರ್ ದೋಷ ಮತ್ತು ಅದರ ಪರಿಣಾಮವಾಗಿ ಉಂಟಾದ ವಿಳಂಬ. ಜೊತೆಗೆ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮತ್ತು ಸಿಬ್ಬಂದಿಗಳ ನಡುವಿನ ಭಿನ್ನಾಭಿಪ್ರಾಯಗಳ ವಿಷಯಗಳ ಕುರಿತು ಸಭೆಯಲ್ಲಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಅವರು, ಸಿಬ್ಬಂದಿಯ ಪರವಾಗಿ ಗಿರಿ ನಾಥ್ ಅವರಿಗೆ ಪತ್ರ ಬರೆದಿದ್ದರು.
ಸಭೆ ಬಳಿಕ ಪ್ರತಿಕ್ರಿಯೆ ನೀಡಿರುವ ಅಮೃತ್ ರಾಜ್ ಅವರು, ಮೇಲಾಧಿಕಾರಿಗಳಿಂದ ಸಿಬ್ಬಂದಿಗಳು ಮಾನಸಿಕ ಕಿರುಕುಳಎದುರಿಸುತ್ತಿದ್ದರು. ಈ ವಿಷಯವನ್ನು ಎಸಿಎಸ್ ಅವರ ಗಮನಕ್ಕೆ ತಂದಿದ್ದೇವೆ. ಎನ್‌ಐಸಿಯೊಂದಿಗೆ ಮಾತುಕತೆ ನಡೆಸಿ ಸಾಫ್ಟ್‌ವೇರ್ ದೋಷ ಸರಿಪಡಿಸುವ ಭರವಸೆ ನೀಡಿದ್ದಾರೆಂದು ಹೇಳಿದರು.
ಇದೇವೇಳೆ ಉಪ ಆಯುಕ್ತ ಡಿ.ಕೆ. ಬಾಬು ಮತ್ತು ವರಲಕ್ಷ್ಮಿ ಅವರನ್ನು ಅಮಾನತುಗೊಳಿಸಿರುವುದನ್ನೂ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ತುಷಾರ್ ಗಿರಿನಾಥ್ ಅವರ ಭರವಸೆ ಹಿನ್ನೆಲೆಯಲ್ಲಿ ಈ ವಿಚಾರವನ್ನು ನಮ್ಮ ಸಿಬ್ಬಂದಿ ಮುಂದುವರೆಸುವುದಿಲ್ಲ. ಕೆಲಸಕ್ಕ ಗಮನ ಹರಿಸಲಿದ್ದಾರೆಂದು ತಿಳಿಸಿದರು.
ಈ ನಡುವೆ ಹೇಳಿಕೆ ಬಿಡುಗಡೆ ಮಾಡಿರುವ ಮುನೀಶ್ ಮೌದ್ಗಿಲ್ ಅವರು, ಯಾವುದೇ ಸಿಬ್ಬದಿ ವಿರುದ್ಧ ನಾನು ಅವಹೇಳನಕಾರಿ ಭಾಷೆ ಬಳಕೆ ಮಾಡಿಲ್ಲ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನನ್ನ ವಿರುದ್ಧ ಕೇಳಇ ಬಂದಿರುವ ಆರೋಪಗಳು ತಪ್ಪು ಮಾಡಿದ ಅಧಿಕಾರಿಗಳ ರಕ್ಷಿಸಲು ಮಾಡಿರುವ ಪ್ರಯತ್ನವಾಗಿದೆ ಅವರು ಆರೋಪಿಸಿದ್ದಾರೆ.