ಚಿತ್ರದುರ್ಗ: ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಬಳಿ ನಡೆದ ಬಸ್–ಲಾರಿ ಡಿಕ್ಕಿ ಮತ್ತು ಅಗ್ನಿ ಅವಘಡದಲ್ಲಿ ಸಜೀವ ದಹನಕ್ಕೊಳಗಾದ ಪ್ರಯಾಣಿಕರ ಮೃತದೇಹಗಳನ್ನು ಡಿಎನ್ಎ ವರದಿ ಆಧರಿಸಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ಹುಬ್ಬಳ್ಳಿ ಎಫ್‌ಎಸ್ಎಲ್ ಲ್ಯಾಬ್‌ನಿಂದ ಫೊರೆನ್ಸಿಕ್ ವರದಿ ಶನಿವಾರ ಬೆಳಿಗ್ಗೆ ಲಭ್ಯವಾದ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಲಾರಿ ಚಾಲಕ ಕುಲದೀಪ್ ಯಾದವ್ ಅವರ ಕುಟುಂಬಸ್ಥರು ಇನ್ನೂ ಮುಂದೆ ಬರದ ಕಾರಣ, ಅವರ ಮೃತದೇಹ ಜಿಲ್ಲಾಸ್ಪತ್ರೆಯಲ್ಲಿಯೇ ಇರಿಸಲಾಗಿದೆ.
ಅಪಘಾತದಲ್ಲಿ ಮೃತಪಟ್ಟವರು ಧರಿಸಿದ್ದ ಆಭರಣಗಳನ್ನೂ ಸಹ ಪೊಲೀಸರು ಕುಟುಂಬಸ್ಥರಿಗೆ ಹಿಂತಿರುಗಿಸಿದ್ದಾರೆ.
ಪ್ರಕ್ರಿಯೆಯ ಭಾಗವಾಗಿ ಗುರುವಾರವೇ ಸಂಬಂಧಿಕರಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.
ತನ್ನ ಪತ್ನಿ ಬಿಂದು (29) ಮತ್ತು ಐದು ವರ್ಷದ ಮಗಳು ಗ್ರೇಯಾ ಅವರ ಮೃತದೇಹಗಳನ್ನು ಸ್ವೀಕರಿಸಿದ ದರ್ಶನ್ ಅವರ ಆಕ್ರಂದನ ಮುಗಿಲು ಮುಟ್ಟಿದ್ದು, ನಂತರ ಬಂಧುಗಳು ಸಾಂತ್ವನ ಹೇಳಿದರು.
ಏನಿದು ಘಟನೆ..?
ಗುರುವಾರ ಬೆಳಗಿನ ಸುಮಾರು 2 ಗಂಟೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಲಾರಿ ಕಂಟೇನರ್ ಲಾರಿ ಡಿವೈಡರ್‌ನ್ನು ದಾಟಿ ಖಾಸಗಿ ಸ್ಲೀಪರ್ ಬಸ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಬಸ್ ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು, ಹೊತ್ತು ಉರಿದಿತ್ತು.
ಘಟನೆಯಲ್ಲಿ ಆರಂಭದಲ್ಲೇ ಆರು ಮಂದಿ ಮೃತಪಟ್ಟಿದ್ದು, ಬಳಿಕ ಬಸ್ ಚಾಲಕ ಮೊಹಮ್ಮದ್ ರಫೀಕ್ (38) ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಘಟನೆಯಲ್ಲಿ ಲಾರಿ ಚಾಲಕ ಕುಲದೀಪ್ ಯಾದವ್ (29) ಸ್ಥಳದಲ್ಲಿಯೇ ಸಜೀವ ದಹನವಾಗಿದ್ದರು. ಇವರು ಉತ್ತರ ಪ್ರದೇಶದ ಪ್ರತಾಪಗಢದ ಕಿಥೌಲಿ ನಿವಾಸಿಯಾಗಿದ್ದರು ಎಂದು ತಿಳಿದುಬಂದಿದೆ.
ಒಟ್ಟು ಏಳು ಮಂದಿ ಈ ದುರಂತದಲ್ಲಿ ಜೀವ ಕಳೆದುಕೊಂಡಿದ್ದು, 28 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಿರಿಯೂರು, ಶಿರಾ, ತುಮಕೂರು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಬೆಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ದುರ್ಘಟನೆಯಲ್ಲಿ ಮೃತಪಟ್ಟವರನ್ನು ಬೆಂಗಳೂರಿನ ಗಿರಿನಗರದ ಬಿಂದು (29) ಮತ್ತು ಮಗಳು ಗ್ರೇಯಾ (5), ಚನ್ನರಾಯಪಟ್ಟಣ ನಿವಾಸಿಗಳಾದ ಮನಸಾ (27) ಮತ್ತು ನವ್ಯಾ (26), ಉತ್ತರ ಕನ್ನಡ ಜಿಲ್ಲೆಯ ರಶ್ಮಿ ಮಹಾಲೆ (24). ಉತ್ತರ ಪ್ರದೇಶದ ಕುಲದೀಪ್ ಯಾದವ್ (29), ಹಾವೇರಿಯ ಮೊಹಮ್ಮದ್ ರಫೀಕ್ (38) ಎಂದು ಗುರ್ತಿಸಲಾಗಿದೆ.