ಬೆಂಗಳೂರು: ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ 112 ಹೊಯ್ಸಳ ಸಿಬ್ಬಂದಿ ಭಾನುವಾರು ಮೂವರನ್ನು ರಕ್ಷಣೆ ಮಾಡಿದ್ದಾರೆ.
ನಗರದಲ್ಲಿ ಮೂರು ವಿಭಿನ್ನ ಘಟನೆಯಲ್ಲಿ ಒಂದು ಮಗು, ಮಾನಸಿಕ ಅಸ್ವಸ್ಥ ಬಾಲಕ ಹಾಗೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಹೊಯ್ಸಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಭಾನುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ, ವಿವೇಕನಗರ ಮುಖ್ಯ ರಸ್ತೆಯಲ್ಲಿರುವ ಹಾಸ್ಟೆಲ್‌ನಲ್ಲಿ ತಂಗಿದ್ದ ಯುವಕನೊಬ್ಬ ತನ್ನ ಪೋಷಕರಿಗೆ "ನಾನು ಸಾಯುತ್ತಿದ್ದೇನೆ" ಎಂದು ಸಂದೇಶ ಕಳುಹಿಸಿದ್ದಾನೆ.
ಇದರಿಂದ ಆತಂಕಗೊಂಡ ಪೋಷಕರು ತಕ್ಷಣ 112 ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ.
ಕೂಡಲೇ ಹೊಯ್ಸಳ ಸಿಬ್ಬಂದಿ, ಸಹಾಯಕ ಸಬ್-ಇನ್ಸ್‌ಪೆಕ್ಟರ್ ದೇವರಾಜು ಮತ್ತು ಹೆಡ್ ಕಾನ್‌ಸ್ಟೆಬಲ್ ನಿಂಗಪ್ಪ ಎಂಟು ನಿಮಿಷಗಳಲ್ಲಿ ಸ್ಥಳ ತಲುಪಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಯುವಕ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು, ಗಾಯಗೊಂಡು ನರಳುತ್ತಿರುವುದು ಕಂಡು ಬಂದಿದೆ. ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಸಕಾಲಿಕ ತುರ್ತು ವೈದ್ಯಕೀಯ ಚಿಕಿತ್ಸೆ ದೊರೆತ ಹಿನ್ನೆಲೆಯಲ್ಲಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮತ್ತೊಂದು ಘಟನೆಯಲ್ಲಿ, ಚಾಮರಾಜಪೇಟೆ ಹೊಯ್ಸಳ ಪೊಲೀಸರು ಡಿಸೆಂಬರ್ 27 ರ ರಾತ್ರಿ ಕಾಣೆಯಾಗಿದ್ದ 16 ವರ್ಷದ ಮಾನಸಿಕ ಅಸ್ವಸ್ಥ ಬಾಲಕನನ್ನು ಪತ್ತೆಹಚ್ಚಿದ್ದಾರೆ.
ಆ ಬಾಲಕನ ತಾಯಿ ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಹೊಯ್ಸಳಸಿಬ್ಬಂದಿ ಸ್ಥಳೀಯ ಮಾಹಿತಿಯನ್ನು ಸಂಗ್ರಹಿಸಿ ಅದೇ ರಾತ್ರಿ ಬಾಲಕನನ್ನು ಪತ್ತೆಹಚ್ಚಿ, ಆತನ ತಾಯಿಯ ಮಡಿಲು ಸೇರಿಸಿದ್ದಾರೆ.
ಅದೇ ರೀತಿ, ಜೆಪಿ ನಗರ ಹೊಯ್ಸಳ ಪೊಲೀಸರು ಜೆಪಿ ನಗರದ 3ನೇ ಹಂತದ ಬಳಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಅಪಹರಿಸಿದ್ದ ಎರಡು ವರ್ಷದ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ಮಹಿಳೆಯೊಬ್ಬರು ಮಗುವಿನೊಂದಿಗೆ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಹೊಯ್ಸಳ ಸಿಬ್ಬಂದಿ ಆಕೆಯನ್ನು ಪ್ರಶ್ನಿಸಿದ್ದಾರೆ. ಆಕೆ ನೀಡಿದ ಮಾಹಿತಿ ಅನುಮಾನವನ್ನು ಹುಟ್ಟುಹಾಕಿದ ಕಾರಣ ಮಗುವನ್ನು ವಶಕ್ಕೆ ತೆಗೆದುಕೊಂಡು, ಪರಿಶೀಲಿಸಿ ತಾಯಿಯೊಂದಿಗೆ ಮಡಿಲು ಸೇರಿಸಿದ್ದಾರೆ.