New Year 2026: ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು; ಭದ್ರತೆಗೆ 20 ಸಾವಿರ ಪೊಲೀಸರ ನಿಯೋಜನೆ

ಸಂಭ್ರಮಾಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ 250 ಕಡೆ ತಾತ್ಕಾಲಿಕವಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುರಕ್ಷಿತ ತಾಣಗಳ ನಿರ್ಮಾಣದ ಜತೆಗೆ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ.
File photo
ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸುವುದು.
Updated on

ಬೆಂಗಳೂರು: ಹೊಸ ವರ್ಷ ಸ್ವಾಗತಿಸಲು ಬೆಂಗಳೂರು ಸಜ್ಜಾಗುತ್ತಿದ್ದು, ಇದರ ಬೆನ್ನಲ್ಲೇ ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಇದರಂತೆ ನಗರದಲ್ಲಿ 20 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ಹೇಳಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕ ಎಂ.ಎ. ಸಲೀಂ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರೊಂದಿಗೆ ಸಭೆ ನಡೆಸಿದ ನಂತರ ಸಚಿವರು ಮಾಹಿತಿ ನೀಡಿದರು.

ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಬಾರಿ 10 ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಎಂದು ಪೊಲೀಸ್ ಇಲಾಖೆ ಅಂದಾಜಿಸಿದೆ. ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ 14 ಸಾವಿರ ಪೊಲೀಸರು, 2,500 ಮಂದಿ ಸಂಚಾರ ಪೊಲೀಸರು, 88 ಕೆಎಸ್‍ಆರ್‌ಪಿ ತುಕಡಿ, 21 ಸಿಎಆರ್ ತುಕಡಿ, 266 ಹೊಯ್ಸಳ ವಾಹನ, 250 ಕೋಬ್ರಾ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ, 400 ಮಂದಿ ಟ್ರಾಫಿಕ್ ವಾರ್ಡನ್‍ಗಳು, ಪೌರ ರಕ್ಷಣೆ ಮತ್ತು ಗೃಹರಕ್ಷಕ ದಳ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಜನದಟ್ಟಣೆ ನಿಯಂತ್ರಿಸಲು ಜಲ ಫಿರಂಗಿ ವಾಹನಗಳನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

File photo
ಹೊಸ ವರ್ಷ 2026 ಸಂಭ್ರಮಾಚರಣೆ: ಬೆಂಗಳೂರು ಪೊಲೀಸರಿಂದ ಮಾರ್ಗಸೂಚಿ ಬಿಡುಗಡೆ

ಸಂಭ್ರಮಾಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ 250 ಕಡೆ ತಾತ್ಕಾಲಿಕವಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುರಕ್ಷಿತ ತಾಣಗಳ ನಿರ್ಮಾಣದ ಜತೆಗೆ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಜನದಟ್ಟಣೆ ಸ್ಥಳಗಳಲ್ಲಿ ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತದೆ. ಮುಖ ಚರ್ಯೆ ಗುರುತಿಸುವ ಕೃತಕ ಬುದ್ಧಿಮತ್ತೆಯ (ಎ.ಐ) ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ ರವಾನಿಸಲಿವೆ ಎಂದು ವಿವರಿಸಿದರು.

ಮಹಿಳಾ ಸುರಕ್ಷತೆ ಮತ್ತು ಜನಸಂದಣಿ ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಬಾರ್ ಮತ್ತು ರೆಸ್ಟೋರೆಂಟ್‍ಗಳು, ಮೆಟ್ರೊ ಕಾರಿಡಾರ್, ಮನರಂಜನಾ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಡಿಜಿಪಿ 15 ಅಂಶಗಳ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಅಗತ್ಯ ಸ್ಥಳಗಳಲ್ಲಿ ವೀಕ್ಷಣಾ ಗೋಪುರ (ವಾಚ್ ಟವರ್) ನಿರ್ಮಿಸಲಾಗಿದೆ. 180 ಕಡೆ ಫೋಕಸ್‌ ಲೈಟ್‍ಗಳನ್ನು ಅಳವಡಿಸಲಾಗಿದೆ. ಅಹಿತಕರ ಘಟನೆ ನಡೆದರೂ ಸಾರ್ವಜನಿಕರು ಕೂಡಲೇ ಮಾಹಿತಿ ನೀಡಲು ಪೊಲೀಸ್ ಆ್ಯಕ್ಸಿಸ್ ಕಂಟ್ರೋಲ್, ವಾಹನ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಟ್ಯಾಕ್ಸಿ ಸೇವೆ ಸಿಗದಿದ್ದರೆ ಜನರ ಅನುಕೂಲಕ್ಕೆ ಎಂಟು ಕಡೆ ಸಾರಿಗೆ ವ್ಯವಸ್ಥೆ ಮಾಡಿದ್ದು, ಜನರು ಸುರಕ್ಷಿತವಾಗಿ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಆಂಬುಲೆನ್ಸ್, ವಾಹನಗಳು, ಸಂಚಾರ ಸಮಸ್ಯೆ ಸೇರಿದಂತೆ ಜನರಿಗೆ ಅಗತ್ಯ ಮಾಹಿತಿ ನೀಡಲು ಮೊದಲ ಬಾರಿಗೆ ಕ್ಯೂ ಆರ್ ಕೋಡ್‍ನ ‘ಹೀಟ್ ಮ್ಯಾಪ್' ಪರಿಚಯಿಸಲಾಗಿದೆ. ಅತಿ ಹೆಚ್ಚು ಜನ ಸೇರಿರುವ ಸ್ಥಳಗಳನ್ನು ಕೆಂಪು ಬಣ್ಣದಿಂದ ಗುರುತಿಸಲಾಗುತ್ತದೆ. ಹಳದಿ ಬಣ್ಣದಿಂದ ಗುರುತಿಸುವ ಸ್ಥಳಗಳು ಹೆಚ್ಚು ಜನ ಸೇರುತ್ತಿರುವುದನ್ನು ಸೂಚಿಸುತ್ತವೆ. ಹಸಿರು ಬಣ್ಣ ಇರುವುದು ಕಡಿಮೆ ಜನಸಂದಣಿ ಸೂಚಿಸುತ್ತದೆ. ಈ ವ್ಯವಸ್ಥೆಯನ್ನು ಕಮಾಂಡ್ ಸೆಂಟರ್‌ನಿಂದ ನಿರ್ವಹಿಸಲಾಗುತ್ತದೆ. ಇದನ್ನು ಆಧರಿಸಿ ಪೊಲೀಸರು ಜನಸಂದಣಿಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com