ಬೆಂಗಳೂರು: ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಕೋರ್ಟ್ ಹೊಸ ವರ್ಷದ ಹೊತ್ತಲ್ಲಿ ಬಿಗ್ ರಿಲೀಫ್ ನೀಡಿದೆ.
ಜಾಮೀನು ಕೋರಿ ವೀರೇಂದ್ರ ಪಪ್ಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಪ್ರಕರಣ ವಿಚಾರವಾಗಿ ಶಾಸಕ ವೀರೇಂದ್ರ ಪಪ್ಪಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿ, ಗೋವಾ, ಮುಂಬೈ ಸೇರಿದಂತೆ ಪಪ್ಪಿಗೆ ಸಂಬಂಧಿಸಿದ ಎಲ್ಲ ಸ್ಥಳಗಳ ಮೇಲೆ ರೇಡ್ ನಡೆದಿತ್ತು. ಸತತ 18 ಗಂಟೆಗೂ ಹೆಚ್ಚು ಕಾಲ ಪರಿಶೀಲಿಸಿದ್ದ ಅಧಿಕಾರಿಗಳು, ಕೆ.ಸಿ.ವೀರೇಂದ್ರ ಪಪ್ಪಿ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು, ವಿದೇಶಿ ಕರೆನ್ಸಿ ಸೇರಿದಂತೆ ಚಿನ್ನಾಭರಣ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದರು.
ಪಿಎಂಎಲ್ ಕಾಯ್ದೆಯಡಿ ವೀರೇಂದ್ರ ಪಪ್ಪಿ ಅವರನ್ನು ಬಂಧಿಸಿ ಇಡಿ ವಿಚಾರಣೆ ನಡೆಸಿತ್ತು. ದಾಳಿ ನಡೆಸಿದ ಬಳಿಕ ಪಪ್ಪಿ ಬ್ಯಾಂಕ್ ಖಾತೆಯಿಂದ 55 ಕೋಟಿ ನಗದು ಫ್ರೀಜ್ ಮಾಡಿರುವುದಾಗಿ ಇಡಿ ಪ್ರಕಟಣೆ ಹೊರಡಿಸಿತ್ತು.
ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಬೆಲ್ಲಾಜಿಯೊ ಕ್ಯಾಸಿನೊ, ಮರೀನಾ ಕ್ಯಾಸಿನೊ, ಕ್ಯಾಸಿನೊ ಜ್ಯುವೆಲ್ ಹೀಗೆ ಅಂತಾರಾಷ್ಟ್ರೀಯ ಕ್ಯಾಸಿನೊ ಸದಸ್ಯತ್ವ, ವಿವಿಧ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು, ತಾಜ್, ಹಯಾತ್, ಲೀಲಾ ಐಷಾರಾಮಿ ಆತಿಥ್ಯ ಸದಸ್ಯತ್ವ ಕಾರ್ಡ್‌ಗಳನ್ನು ಪಪ್ಪಿ ಹೊಂದಿರೋದು ದಾಳಿ ವೇಳೆ ಬಯಲಾಗಿತ್ತು.