ಬೆಂಗಳೂರು: ಕೋಗಿಲು ಬಡಾವಣೆಯ ಅಕ್ರಮ ಒತ್ತುವರಿದಾರರಿಗೆ ಪುನರ್ವಸತಿ ನೀಡುವುದೇ ನಿಮ್ಮ ಸರ್ಕಾರದ ನೀತಿಯಾದರೆ, ರಾಜ್ಯದಾದ್ಯಂತ ತೆರವುಗೊಂಡ ಎಲ್ಲಾ ಒತ್ತುವರಿಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆಯೇ? ಎಂದು ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷ ಬಿಜೆಪಿ ಪ್ರಶ್ನೆ ಮಾಡಿದೆ.
ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡ ಅರ್ಹರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಮಾತನಾಡಿ, ಕೋಗಿಲು ಫಕೀರ್ ಬಡಾವಣೆಯ ಸಂತ್ರಸ್ತರಿಗೆ ಬೈಯಪ್ಪನ ಹಳ್ಳಿಯಲ್ಲಿ ಮನೆ ಕೊಡಲು ಸರ್ಕಾರ ಮುಂದಾಗಿರುವ ಮೂಲಕ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೋಗಿಲು ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕೂಡಾ ಪ್ರತಿಕ್ರಿಯೆ ನೀಡಿದೆ. ಹಾಗಾದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜೊತೆ ಕರ್ನಾಟಕ ಕೈಜೋಡಿಸಿದ್ಯಾ? ಎಂದು ರಾಜ್ಯದ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಒತ್ತಡದ ರಾಜಕಾರಣ ಹಾಗೂ ತುಷ್ಟೀಕರಣ ರಾಜಕಾರಣದಿಂದ ಹೀಗಾಗುತ್ತಿದೆ. ಎಲ್ ಡಿ ಎಫ್ ಹಾಗೂ ಯುಡಿಎಫ್ ನಡುವಿನ ಸ್ಪರ್ಧೆಗೆ ಕರ್ನಾಟಕ ಬಲಿಯಾಗುತ್ತಿದೆ. ಕೇರಳದಲ್ಲಿ ಅಲ್ಪಸಂಖ್ಯಾತರ ಓಟು ಪಡೆಯಲು ಕರ್ನಾಟಕ ಬಲಿಯಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ನಿರಾಶ್ರಿತರಿಗೆ ಸರ್ಕಾರ ಮನೆಗಳನ್ನು ಒದಗಿಸಿಲ್ಲ, ಆದರೆ, ಅಕ್ರಮ ವಲಸಿಗರಿಗೆ ಮನೆಗಳನ್ನು ನೀಡುತ್ತಿದ್ದಾರೆ. ಇದರಿಂದಕರ್ನಾಟಕದಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವವರಿಗೆ ಮನೆಗಳು ಸಿಗುತ್ತವೆ ಎಂಬ ಸಂದೇಶವನ್ನು ರವಾನೆಯಾಗುತ್ತಿದೆ. ಪಶ್ಚಿಮ ಬಂಗಾಳ ಸರ್ಕಾರದಂತೆಯೇ, ಕರ್ನಾಟಕದ ಕಾಂಗ್ರೆಸ್ ಸರ್ಕಾರವೂ ಅಕ್ರಮ ವಲಸಿಗರಿಗೆ ಮನೆಗಳು ಮತ್ತು ದಾಖಲೆಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ವಸತಿ ಸಚಿವ ಜಮೀರ್ ಅಹಮದ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಮೀರ್ ಅಹಮದ್ ಖಾನ್ ಅವರೇ ಕರ್ನಾಟಕದಲ್ಲಿ ನೀವು ಎಷ್ಟು ಜನರಿಗೆ ಮತದಾರರ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್ ಮಾಡಿಸಿಕೊಟ್ಟಿದ್ದೀರಿ ಹೇಳಿ. ನೀವೆಲ್ಲ ಸೇರಿಕೊಂಡು ಕರ್ನಾಟಕದ ಚಿತ್ರಣವನ್ನು ಬದಲಾಯಿಸಲು ಹೊರಟಿದ್ದೀರಾ. ಪಶ್ಚಿಮ ಬಂಗಾಳದ ರೀತಿ ಕರ್ನಾಟಕವನ್ನು ವಲಸಿಗರ ರಾಜ್ಯ ಮಾಡಲು ಸಂಚು ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಯಾರು ಮುಖ್ಯಮಂತ್ರಿ? ಇಲ್ಲಿ ಯಾರು ಸರ್ಕಾರ ನಡೆಸುತ್ತಾರೆ ಎಂಬುದೇ ಯಾರಿಗೂ ಅರ್ಥವಾಗುತ್ತಿಲ್ಲ. ಈ ಸರ್ಕಾರದ ಮೂಗುದಾರ ಎಲ್ಲಿದೆ? ದೆಹಲಿಯಿಂದ ನಿರ್ದೇಶನ ಬರುತ್ತಿದ್ದಂತೆ ಸಿಎಂ ಹಾಗೂ ಡಿಸಿಎಂ ಎದ್ದೋ ಬಿದ್ದವರಂತೆ ವಲಸಿಗರಿಗೆ ಮನೆ ನಿರ್ಮಿಸಿ ಕೊಡಲು ಮುಂದಾಗಿದ್ದಾರೆ ಇದು ತುಷ್ಟೀಕರಣದ ಪರಮಾವಧಿಯಲ್ಲವೇ? ಎಂದು ಪ್ರಶ್ನಿಸಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶ್ರಯ ಯೋಜನೆಯಡಿ ಮಾನವೀಯತೆಯ ದೃಷ್ಟಿಯಿಂದ ವಲಸಿಗರಿಗೆ ಮನೆಗಳನ್ನು ನೀಡಲು ನಿರ್ಧರಿಸಿದ್ದಾರೆ. ಇವರು ಭಾರತೀಯರೇ ಅಥವಾ ವಿದೇಶಿಯರೇ ಎಂಬುದನ್ನು ಪರಿಶೀಲಿಸಲು ಉನ್ನತ ಮಟ್ಟದ ತನಿಖೆ ನಡೆಸಬೇಕು. ಅಲ್ಲಿಯವರೆಗೆ ಅವರಿಗೆ ಮನೆಗಳನ್ನು ನೀಡಬಾರದು ಎಂದು ಒತ್ತಾಯಿಸಿದರು.
ವಾಸಿಂ ಎಂಬ ಕಾಂಗ್ರೆಸ್ ನಾಯಕ 4-5 ಲಕ್ಷ ರೂ.ಗಳನ್ನು ತೆಗೆದುಕೊಂಡು ಮನೆ ನಿರ್ಮಿಸಿದ್ದಾರೆ. ಇದು ಕಾಂಗ್ರೆಸ್ ಪ್ರಾಯೋಜಿತ ಅಕ್ರಮವಾಗಿದೆ. 40 ಸ್ಥಳಗಳಲ್ಲಿ ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ. ಎಲ್ಲರಿಗೂ ಮಾನವೀಯತೆ ತೋರಿಸಬೇಕಾದರೆ, ಎಲ್ಲರಿಗೂ ಮನೆಗಳನ್ನು ನಿರ್ಮಿಸಬೇಕು. ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡುವವರಿಗೆ ಮನೆಗಳನ್ನು ನೀಡುವ ಮೂಲಕ ಭೂ ಅತಿಕ್ರಮಣ ಮಾಫಿಯಾವನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದು ಮಿನಿ ಪಾಕಿಸ್ತಾನ ಸೃಷ್ಟಿಗೆ ಮತ್ತು ಡ್ರಗ್ ಮಾಫಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ರಾಜ್ಯದಲ್ಲಿ 17.31 ಲಕ್ಷ ಜನರಿಗೆ ನಿವೇಶನವಿಲ್ಲ. 3 ಲಕ್ಷ ಜನರಿಗೆ ಮನೆಗಳಿಲ್ಲ. ಒಟ್ಟಾರೆಯಾಗಿ, 37.48 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಮನೆಗಳಿಗಾಗಿ ಕಾಯುತ್ತಿದ್ದಾರೆಂದು ತಿಳಿಸಿದರು.