ಬೆಂಗಳೂರು: BMIC/NICE ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಇಳಿ ವಯಸ್ಸಿನಲ್ಲಿ ನನ್ನನ್ನು ಎಳೆಯಲಾಗುತ್ತಿದೆ ಎಂಬ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರಹೇಳಿಕೆಯನ್ನು ನೈಸ್ ಕಂಪನಿ ನಿರಾಕರಿಸಿದೆ,
ಈ ಕುರಿತು ಹೇಳಿಕೆ ನೀಡಿರುವ ಕಂಪನಿಯು,ದೇವೇಗೌಡ ಅವರ ಹೇಳಿಕೆ ವಾಸ್ತವಾಂಶಗಳಿಗೆ ವಿರುದ್ಧವಾಗಿದ್ದು, ತಪ್ಪುದಾರಿಗೆಳೆಯುವಂತಿದೆ ಎಂದು ಆರೋಪಿಸಿದೆ.
ಪ್ರಸ್ತುತ ನಡೆಯುತ್ತಿರುವ ಪ್ರಕರಣಗಳು ದೇವೇಗೌಡ ಅವರು ಹಿಂದೆ ಕೈಗೊಂಡಿದ್ದ ಕ್ರಮಗಳ ನೇರ ಪರಿಣಾಮವಾಗಿವೆ. ನೈಸ್ ಲಿಮಿಟೆಡ್ ಅಥವಾ ಸರ್ಕಾರವು ಅವರ ಮೇಲೆ ಅಥವಾ ರೈತರ ಮೇಲೆ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದೇ ವೇಳೆ BMIC ಯೋಜನೆಯನ್ನು ನ್ಯಾಯಾಂಗದ ನಿರ್ದೇಶನಗಳಂತೆ ಕಾನೂನುಬದ್ಧವಾಗಿ ಜಾರಿಗೆ ತರಲು ಬದ್ಧವಾಗಿದ್ದೇವೆ. ಕಾನೂನು ಮತ್ತು ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ಸದಾ ಬದ್ಧರಾಗಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
ಈ ಹಿಂದೆ ಹೇಳಿಕೆ ನೀಡಿದ್ದ ದೇವೇಗೌಡ ಅವರು. ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ಸಂಬಂಧ ಈಚೆಗೆ ಸುಪ್ರೀಂಕೋರ್ಟ್‌ನಲ್ಲಿ ನನ್ನನ್ನು ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಸಿದ್ದಾರೆ. ಈ ಇಳಿವಯಸ್ಸಿನಲ್ಲಿ ನಾನು ನ್ಯಾಯಾಲಯಕ್ಕೆ ಅಲೆದಾಡಬೇಕೆ ಎಂದು ಪ್ರಶ್ನಿಸಿದರು.
ಈ ಅರ್ಜಿಯಲ್ಲಿ ರಾಜ್ಯ ಸರ್ಕಾರ, ಕೆಲವು ರೈತರು ಮತ್ತು ನನ್ನನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಈ ಯೋಜನೆ ಆರಂಭಿಸಿದಾಗ ನಾನು ಮುಖ್ಯಮಂತ್ರಿ, ಸಿದ್ದರಾಮಯ್ಯ ಹಣಕಾಸು ಸಚಿವ ಆಗಿದ್ದರು. ಯೋಜನೆಯ ಸಂಪೂರ್ಣ ಮಾಹಿತಿ ಸಿದ್ದರಾಮಯ್ಯಗೆ ಇದೆ. ಇಷ್ಟು ವರ್ಷದ ಇಲ್ಲದ ಅರ್ಜಿಯನ್ನು ಈಗ ಸಲ್ಲಿಸಲಾಗಿದೆ. ಅಡ್ವೊಕೇಟ್ ಜನರಲ್ ಮತ್ತು ಕಾನೂನು ಸಲಹೆಗಾರರು ಇದ್ದರೂ ರಾಜ್ಯ ಸರ್ಕಾರವು ಈ ಪ್ರಕರಣಕ್ಕೆಂದೇ ಪ್ರತ್ಯೇಕ ಕಾನೂನು ಸಲಹೆಗಾರರನ್ನು ರೂ.50 ಲಕ್ಷ ಕೊಟ್ಟು ನೇಮಕ ಮಾಡಿದೆ. ಆದರೆ ನಾನು ಈ ವಯಸ್ಸಿನಲ್ಲಿ ಹಣ ಕೊಟ್ಟು ವಕೀಲರನ್ನು ಇಡಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.