ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಕಮೆಂಟ್ ಮಾಡಿದ್ದವರ ವಿರುದ್ಧ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆಂಗಳೂರು ಸಿಟಿ ಸೈಬರ್ ಕ್ರೈಂ ಪೊಲೀಸರಿಗೆ ಕೆಲವು ದಿನಗಳ ಹಿಂದೆ ದೂರು ನೀಡಿದ್ದರು. ಆದರೆ ಆ ದೂರಿನ ಬಗ್ಗೆ ಪೊಲೀಸರು ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ವಿಚಾರಿಸಲು ಇಂದು ಸ್ವತಃ ವಿಜಯಲಕ್ಷ್ಮಿ ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದರು.
‘ನಮ್ಮ ದೇಶದಲ್ಲಿ ವ್ಯವಸ್ಥೆ ಮತ್ತು ಕಾನೂನು ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೆ. ಆದರೆ ನನ್ನ ವಿಚಾರದಲ್ಲಿ ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ವಿಜಯಲಕ್ಷ್ಮಿ ದರ್ಶನ್ ಬರೆದುಕೊಂಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಏನು ಹೇಳಿದ್ದಾರೆ?
ನಾನು ದಾಖಲಿಸಿದ ದೂರು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ, ಆದರೆ ಬೇರೊಬ್ಬ ಮಹಿಳೆಯ ದೂರಿನ ಮೇಲೆ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ನನ್ನ ದೂರು ಕಡಿಮೆ ಮುಖ್ಯವೇ ಅಥವಾ ಮೌಲ್ಯವೇ ಎಂದು ವಿಜಯಲಕ್ಷ್ಮಿ ದರ್ಶನ್ ಅವರು ಪ್ರಶ್ನಿಸಿದ್ದಾರೆ.
ನಾನು ದೂರು ನೀಡಿದ ನಂತರ ನನ್ನ ವಕೀಲರು ನಿರಂತರವಾಗಿ ವಿಚಾರಿಸಿದ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂದು, ನನ್ನ ದೂರಿನ ಬಗ್ಗೆ ಖುದ್ದಾಗಿ ಹೋಗಿ ಕೇಳಿದ್ದೇನೆ. ಈ ವಿಳಂಬವು ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವದಿಂದಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.
ಯಾರು ಭಾಗಿಯಾಗಿದ್ದಾರೆ ಎಂಬುದರ ಮೇಲೆ ನ್ಯಾಯವು ಅವಲಂಬಿತವಾಗಿರಬಾರದು. ಅಂತಹ ನಡವಳಿಕೆಯನ್ನು ಬೆಂಬಲಿಸುವ ಅಥವಾ ಆಶ್ರಯ ನೀಡುವವರಿಗೆ ಬಹುಶಃ ಅಂತಹ ಕಾರ್ಯಗಳನ್ನು ಕುರುಡಾಗಿ ಬೆಂಬಲಿಸುವ ಬದಲು ಉತ್ತಮ ಜೀವನ ನಡೆಸಲು ಆ ಶಕ್ತಿಯನ್ನು ಬಳಸುವ ಸಮಯ ಬಂದಿದೆ. ನಾನು ಇನ್ನೂ ಕಾಯುತ್ತಿದ್ದೇನೆ. ನಾನು ಇದನ್ನು ಇಲ್ಲಿಗೆ ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.