ಬೆಂಗಳೂರು: ಮೈಕ್ರೋ ಫೈನಾನ್ಸ್ ಗಳ ಆಟಾಟೋಪಗಳಿಗೆ ಕಡಿವಾಣ ಹೊಸ ಕಾನೂನು ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ಸಚಿವ ಎಚ್‌ಕೆ ಪಾಟೀಲ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಶನಿವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ, ಸಾಲ ವಿತರಣೆಗಳ ವಿವರಗಳನ್ನು ಪತ್ತೆಹಚ್ಚಲು ಮತ್ತು ನವೀಕರಿಸಲು ಆನ್‌ಲೈನ್ ಪೋರ್ಟಲ್, ಪಾರದರ್ಶಕತೆಯನ್ನು ಖಚಿತಪಡಿಸುವುದು ಮತ್ತು ಬಡವರನ್ನು ಸಾಲ ಚಕ್ರಗಳಲ್ಲಿ ಸಿಲುಕಿಸುವ ಚಕ್ರ ಬಡ್ಡಿ ಸಾಲವನ್ನು ತಡೆಗಟ್ಟುವುದು ಸೇರಿದಂತೆ ಹಲವಾರು ಪ್ರಮುಖ ವಿಚಾರಗಳ ಕುರಿತು ಚರ್ಚೆಗಳು ನಡೆದವು.
ಈ ವೇಳೆ ಸಚಿವರು ಸಾಮರ್ಥ್ಯಕ್ಕಿಂತ ಅಧಿಕ ಸಾಲ ನೀಡುವ ಮೂಲಕ ಬಡವರನ್ನು ಸಾಲದ ಸುಳಿಗೆ ಸಿಲುಕಿಸುತ್ತಿರುವ ಹುನ್ನಾರವನ್ನು ತಡೆಯಲು ಆನ್ಲೈನ್ ಪೋರ್ಟಲ್ ಮಾಡಿ, ಯಾರಿಗೆ ಎಷ್ಟು ಸಾಲ ನೀಡಲಾಗಿದೆ ಎಂದು ಅಪ್ಡೇಟ್ ಮಾಡಬೇಕು. ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಹಾಗೂ ಸಾಲ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕವೇ ನಿಭಾಯಿಸಬೇಕು. ಸಾಲಕ್ಕೆ ವಿಧಿಸುವ ಬಡ್ಡಿ ದರದ ಪ್ರಮಾಣ ಪಾರದರ್ಶಕ ಹಾಗೂ ರಿಸರ್ವ್ ಬ್ಯಾಂಕ್ ನೀತಿಗೆ ಅನುಗುಣವಾಗಿರಬೇಕು. ಮೈಕ್ರೋ ಫೈನಾನ್ಸ್ ಕಂಪೆನಿಗಳು ಕಡ್ಡಾಯವಾಗಿ ರಾಜ್ಯದಲ್ಲಿ ನೋಂದಣಿಯಾಗಿರಬೇಕು. ಯಾವುದೇ ಸಂದರ್ಭದಲ್ಲಿ ಈ ನೋಂದಣಿಯನ್ನ ಸರ್ಕಾರ ತಿರಸ್ಕರಿಸಬದುದು. ಮೈಕ್ರೋ ಫೈನಾನ್ಸ್ ಕಂಪೆನಿಗಳ ವ್ಯವಹಾರವನ್ನು ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ADC - AC ಒಳಗೊಂಡ ಒಂಬುಡ್ಸ್ಮನ್ ನೇಮಕ ಮಾಡಬೇಕು.
ಈ ಕಂಪೆನಿಗಳು ಸಾಲದ ಹೆಸರಲ್ಲಿ ಬಡ ಜನರಿಂದ ಯಾವ ವಸ್ತುಗಳು-ಆಸ್ತಿಗಳನ್ನ ಅಡಮಾನ ಇಡಿಸಿಕೊಳ್ಳುವಂತಿಲ್ಲ. ಸಾಲ ಮರುಪಾವತಿ ಮಾಡದವರ ವಿರುದ್ಧ ಮಧ್ಯವರ್ತಿಗಳ ಮೂಲಕ ದಬ್ಬಾಳಿಕೆ ಮಾಡುವಂತಿಲ್ಲ ಎಂದು ತಿಳಿಸಿದ್ದು, ಈ ಪ್ರಮುಖ ಅಂಶಗಳನ್ನು ಕಾನೂನಿನಲ್ಲಿ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.