ಬೆಂಗಳೂರು: ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದ್ದು, ನಾಯಕತ್ವ ಬದಲಾವಣೆ ಕೂಗು ಹೆಚ್ಚಾಗಿರುವ ಸಮಯದಲ್ಲೇ ನ್ಯಾಯಾಲಯದ ಈ ತೀರ್ಪು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲ ಹೆಚ್ಚಾಗುವಂತೆ ಮಾಡಿದೆ.
ಇದಲ್ಲದೆ, ಮುಡಾ ಮತ್ತು ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಂಡಿದ್ದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಧ್ವನಿಯ ಕುಗ್ಗುವಂತೆ ಮಾಡಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಹೆಚ್ಚಾಗಿದ್ದು, ಈ ನಡುವಲ್ಲೇ ನ್ಯಾಯಾಲಯದಿಂದ ಸಿಕ್ಕಿರುವ ತಾತ್ಕಾಲಿಕ ಪರಿಹಾರ ಸಿದ್ದರಾಮಯ್ಯ ಅವರಿಗಷ್ಟೇ ಅಲ್ಲದೆ, ಕಾಂಗ್ರೆಸ್ ಹೈಕಮಾಂಡ್ ಗೂ ಕೂಡ ನಿರಾಳ ತಂದಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿ ಸಿದ್ದರಾಮಯ್ಯ ಸಂಪುಟ ಸಚಿವರ ತಂಡ ಹಾಗೂ ಮಾಜಿ ಸಚಿವರು ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ.
ಹೈಕೋರ್ಟ್ ಆದೇಶ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಡಾ. ಪರಮೇಶ್ವರ, ನಾವೂ ಕೂಡ ಇದನ್ನು ನಿರೀಕ್ಷೆ ಮಾಡಿದ್ದೆವು. ಸಿಬಿಐಗೆ ಕೊಡುವ ಅಂಶ ಇಲ್ಲ ಎಂದು ಲೋಕಾಯುಕ್ತದ ಮೇಲೆ ವಿಶ್ವಾಸವಿಟ್ಟು ಕೋರ್ಟ್ ಆದೇಶಿಸಿದೆ. ಲೋಕಾಯುಕ್ತ ವರದಿ ಸರಿಯಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಪೀಠ ಈ ಆದೇಶ ಮಾಡಿದೆ. ಇ.ಡಿ ತನಿಖೆ ಬಗ್ಗೆ ಮುಂದೆ ನೋಡೋಣ. ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳು ನ್ಯಾಯಯುತವಾಗಿರುತ್ತವೆ ಎಂದು ಹೇಳಿದರು.
ಅವರು ಸುಪ್ರೀಂಕೋರ್ಟ್‌ಗೆ ಬೇಕಿದ್ದರೆ ಹೋಗಲಿ. ನಮ್ಮ ಕಾನೂನು ತಂಡ ಪರಿಶೀಲಿಸಿ ಅದಕ್ಕೆ ಉತ್ತರ ನೀಡುತ್ತಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು ಸ್ವಾಭಾವಿಕವಾಗಿ ನ್ಯಾಯಯುತವಾಗಿ ಇರುತ್ತವೆ ಎಂಬುದಕ್ಕೆ ಇದು ಉದಾಹರಣೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿ, ಮುಡಾ ಪ್ರಕರಣವನ್ನೇಕೆ ಸಿಬಿಐಗೆ ಕೊಡುತ್ತಾರೆ. ಈಗಾಗಲೇ ಪ್ರಕರಣವನ್ನ ಎರಡು ಏಜೆನ್ಸಿ ತನಿಖೆ ಮಾಡುತ್ತಿವೆ, 3ನೇ ತನಿಖಾ ಸಂಸ್ಥೆಗೇಕೆ ಕೊಡಬೇಕು ಎಂದು ಪ್ರಶ್ನಿಸಿದರು.
ಈಗಾಗಲೇ ನಾನು ಹೊಡೆದಾಡುತ್ತಿದ್ದೇನೆ. ನನ್ನ ಮೇಲೆ ಹಾಕಿರುವ ಕೇಸ್ ಸರಿ ಇಲ್ಲ, ಈ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ಮಾಡುತ್ತಿದ್ದೇನೆ. ಎರಡರಿಂದ ಮೂರು ಏಜೆನ್ಸಿಗಳು ಒಟ್ಟಿಗೆ ತನಿಖೆ ಮಾಡೋದು ಸರಿಯಲ್ಲ ಎಂದು ತಿಳಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರತಿಕ್ರಿಯಿಯಿಸ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಉಚ್ಚ ನ್ಯಾಯಾಲಯದಿಂದ ಬಿಗ್ ರಿಲೀಫ್ ಹೊಂದಿರುವುದು ಸತ್ಯ ಮೇವ ಜಯತೆಯಾಗಿದೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷ ದುರುದ್ದೇಶವಾಗಿ ಆಡಳಿತವನ್ನು ಬುಡಮೇಲು ಮಾಡುವುದಕ್ಕೆ ಮುಂದಾಗಿತ್ತು. ಹೊಟ್ಟೆ ಕಿಚ್ಚಿನಿಂದ ವಿರೋಧ ಪಕ್ಷಗಳು ಆರೋಪ ಮಾಡುತ್ತಿದ್ದವು. ಸಿಎಂ ಸಿದ್ದರಾಮಯ್ಯ ಪಾತ್ರ ಯಾವುದೇ ರೀತಿಯಲ್ಲಿ ಇಲ್ಲ ಎಂದು ನಾವು ಮೊದಲಿನಿಂದಲೂ ಹೇಳಿದ್ದೆವು. ಯಾವುದೇ ಸಾಕ್ಷಿ ಇದೆಯಾ ಎಂದು ಕೇಳಲಾಗಿತ್ತು. ಒಟ್ಟಾರೆ ತಮ್ಮ ಅಭಿಪ್ರಾಯವನ್ನು ನಾಯಾಲಯ ಮಾನ್ಯ ಮಾಡಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಪ್ರತಿಕ್ರಿಯಿಸಿ, ನಾವು ಕಾನೂನನನ್ನು ಗೌರವಿಸುತ್ತೇವೆ. ಆದರೆ, ಈ ಕೇಸ್‌ನಲ್ಲಿ ರಾಜಕೀಯ ಮಾಡುವುದೇ ಅವರ ಗುರಿಯಾಗಿತ್ತು. ಆದರೀಗ ಹೈಕೋರ್ಟ್ ಎಲ್ಲಾ ಅಂಶಗಳನ್ನು ಪರಾಮರ್ಶಿಸಿ ಅರ್ಜಿ ವಜಾಗೊಳಿಸಿದೆ. ನಾವು ಲೋಕಾಯುಕ್ತಕ್ಕೆ ಗೌರವ ನೀಡಬೇಕು. ಅದೊಂದು ಸ್ವತಂತ್ರ ಸಂಸ್ಥೆ. ಇದನ್ನು ರಾಜಕೀಯ ಉದ್ದೇಶದಿಂದ ವಿರೋಧ ಮಾಡುತ್ತಲೇ ಬಂದಿದ್ದಾರೆಂದು ಹೇಳಿದರು.
ಸಚಿವ ಎಂ.ಬಿ. ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಮಾತನಾಡಿ, ತಮ್ಮ ಸುಳ್ಳು ಪ್ರಚಾರದ ಮೂಲಕ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರಲು ವಿಪಕ್ಷಗಳು ಯತ್ನಿಸಿದ್ದರು. ಆದರೀಗಹೈಕೋರ್ಟ್ ಆದೇಶದಿಂದ ವಿರೋಧ ಪಕ್ಷಗಳಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.