ಎಂಬಿ ಪಾಟೀಲ್-ಡಿಕೆ ಶಿವಕುಮಾರ್ 
ರಾಜ್ಯ

'Invest Karnataka 2025' ರಾಜ್ಯಕ್ಕೆ ಬಂಪರ್: 10 ಲಕ್ಷ ಕೋಟಿ ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿ!

ನಾಲ್ಕು ದಿನಗಳ ಕಾಲ ಇಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ಸದ್ಯಕ್ಕೆ ರಾಜ್ಯಕ್ಕೆ 10,27,378 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮತ್ತು 6 ಲಕ್ಷ ಉದ್ಯೋಗ ಸೃಷ್ಟಿ ಖಾತ್ರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ ಹೇಳಿದ್ದಾರೆ.

ಬೆಂಗಳೂರು: ನಾಲ್ಕು ದಿನಗಳ ಕಾಲ ಇಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ಸದ್ಯಕ್ಕೆ ರಾಜ್ಯಕ್ಕೆ 10,27,378 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮತ್ತು 6 ಲಕ್ಷ ಉದ್ಯೋಗ ಸೃಷ್ಟಿ ಖಾತ್ರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ.

ಸಮಾವೇಶಕ್ಕೆ ತೆರೆ ಬಿದ್ದ ಬಳಿಕ ಅರಮನೆ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಂಬಿ ಪಾಟೀಲ್, ವಲಯವಾರು ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದರು. ಇನ್ನೂ ಕೆಲವು ಪ್ರತಿಷ್ಠಿತ ಕಂಪನಿಗಳು ಭಾರೀ ಹೂಡಿಕೆಗೆ ಆಸಕ್ತಿ ತೋರಿದ್ದು, ಒಡಂಬಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇವು ಆಖೈರಾದರೆ ಸಮಾವೇಶದ ಮೂಲಕ ಬರಲಿರುವ ಬಂಡವಾಳದ ಮೊತ್ತ ಇನ್ನೂ ಗಮನಾರ್ಹವಾಗಿ ಏರಲಿದೆ. ಈಗ ಖಾತ್ರಿಯಾಗಿರುವ ಹೂಡಿಕೆಯಲ್ಲಿ ಶೇಕಡ 75ರಷ್ಟು ಬೆಂಗಳೂರಿನ ಆಚೆ ಇರುವ ಪ್ರದೇಶಗಳಿಗೆ ಹೋಗಲಿದ್ದು, ಶೇಕಡ 45ರಷ್ಟು ಬಂಡವಾಳವು ಉತ್ತರ ಕರ್ನಾಟಕದ ಪ್ರದೇಶಗಳಿಗೆ ಹರಿಯಲಿದೆ ಎಂದರು. ಸೃಷ್ಟಿಯಾಗಲಿರುವ 6 ಲಕ್ಷ ಉದ್ಯೋಗಗಳು ತಯಾರಿಕೆ ಮತ್ತು ಇಂಧನ ಉತ್ಪಾದನೆ ಕ್ಷೇತ್ರಕ್ಕೆ ಸೇರಿವೆ. ಹೂಡಿಕೆಗಳಲ್ಲಿ ಜಿಂದಾಲ್ ಸಮೂಹವು ಇಂಧನ, ಸಿಮೆಂಟ್, ಉಕ್ಕು ಮತ್ತು ಪೂರಕ ಉದ್ಯಮಗಳಲ್ಲಿ 1.2 ಲಕ್ಷ ಕೋಟಿ ರೂ. ಹೂಡುತ್ತಿದೆ. ಬಲ್ದೋಟಾ ಸಮೂಹವು ಕೊಪ್ಪಳದಲ್ಲಿ 54 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಕೊಪ್ಪಳದಲ್ಲಿ ಉಕ್ಕು ತಯಾರಿಕಾ ಘಟಕವನ್ನು ಸ್ಥಾಪಿಸುತ್ತಿದೆ. ಲ್ಯಾಮ್ ರೀಸರ್ಚ್ ಕಂಪನಿಯು ತಯಾರಿಕೆ ಮತ್ತು ಸಂಶೋಧನೆಗೆ 10 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಬಂಡವಾಳ ತೊಡಗಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಇನ್ನುಳಿದಂತೆ ಸ್ನೀಡರ್ ಎಲೆಕ್ಟ್ರಿಕ್ ಸಂಸ್ಥೆಯು ವಿದ್ಯುತ್ ಸಾಧನಗಳ ತಯಾರಿಕೆ ಮತ್ತು ಸಂಶೋಧನೆಗೆ 2,247 ಕೋಟಿ ರೂ., ವೋಲ್ವೊ ಕಂಪನಿಯು ವಿದ್ಯುಚ್ಚಾಲಿತ ಬಸ್/ಟ್ರಕ್ ತಯಾರಿಕೆಗೆ 1,400 ಕೋಟಿ ರೂ., ಹೋಂಡಾ ಕಂಪನಿಯು ಇ.ವಿ. ವಾಹನಗಳ ತಯಾರಿಕೆಗೆ 600 ಕೋಟಿ ರೂ., ಮತ್ತು ಸ್ಯಾಫ್ರಾನ್ ಕಂಪನಿಯು ಏವಿಯಾನಿಕ್ಸ್ ಉತ್ಪಾದನೆಗೆ 225 ಕೋಟಿ ರೂ. ಹೂಡುತ್ತಿವೆ. 2025-30ರವರೆಗಿನ ನೂತನ ಕೈಗಾರಿಕಾ ನೀತಿಯಡಿ ಒಟ್ಟಾರೆಯಾಗಿ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ ಎಂದರು. ಹೊಸ ನೀತಿಯಡಿಯಲ್ಲಿ ತುಮಕೂರು ಮತ್ತು ವಿಜಯಪುರದಲ್ಲಿ ಕೈಗಾರಿಕಾ ಪಾರ್ಕ್, ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್ ಪಾರ್ಕ್, ಉಳಿದ ಭಾಗಗಳಲ್ಲಿ ಡೀಪ್-ಟೆಕ್ ಪಾರ್ಕ್ ಮತ್ತು ಸ್ವಿಫ್ಟ್ ಸಿಟಿ ಮುಂತಾದವು ಅಸ್ತಿತ್ವಕ್ಕೆ ಬರಲಿವೆ. ಡೀಪ್ ಟೆಕ್ ಮತ್ತು ಸ್ವಿಫ್ಟ್ ಸಿಟಿ ಯೋಜನೆಗಳು ತಲಾ 1 ಲಕ್ಷ ಕೋಟಿ ರೂ. ಹೂಡಿಕೆ ಸೆಳೆಯುವ ಮತ್ತು ತಲಾ 1 ಲಕ್ಷ ಉದ್ಯೋಗ ಸೃಷ್ಟಿಸುವಂತಹ ಶಕ್ತಿ ಹೊಂದಿವೆ. ಕ್ವಿನ್ ಸಿಟಿ ಅಭಿವೃದ್ಧಿಗೆ ಸಂಬಂಧಿಸಿದಂತೆ 10 ವಿ.ವಿ.ಗಳೊಂದಿಗೆ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ ಎಂದು ಪಾಟೀಲ ನುಡಿದರು.

ಬಿಯಾಂಡ್ ಬೆಂಗಳೂರು ಉಪಕ್ರಮಕ್ಕೆ ಉತ್ತೇಜನ: ಶಿವಕುಮಾರ್

ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, 1.10 ಲಕ್ಷ ನೋಂದಾಯಿತ ವಾಹನಗಳಿದ್ದು, ಇದು ನಗರದ ಜನಜೀವನದ ಮೇಲೆ ವಿಪರೀತ ಒತ್ತಡ ಸೃಷ್ಟಿಸಿದೆ. ಆದ್ದರಿಂದ ಕೈಗಾರಿಕೆಗಳು ಬೆಂಗಳೂರಿನಿಂದ ಹೊರಗಿರುವ ಪ್ರದೇಶಗಳಿಗೆ ಹೋಗುವುದನ್ನು ಉತ್ತೇಜಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ಪ್ರೋತ್ಸಾಹವನ್ನೇ ನೀಡಲಾಗುತ್ತಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೂ ಹೊಸ ನೀತಿ ತರಲಾಗಿದೆ. ವಿಶೇಷವಾಗಿ ರಾಜ್ಯದ 300 ಕಿ.ಮೀ. ಉದ್ದದ ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಗಮನ ಹರಿಸಲಿದ್ದೇವೆ. ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನೆರವಿಗೆ ಪೋರ್ಟಲ್ ಆರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಭೂಮಿಯ ಬೆಲೆ ಜಾಸ್ತಿ ಇದೆ. ಹೀಗಾಗಿ ಉದ್ಯಮಿಗಳಿಗೆ ನೆರವು ನೀಡುವ ಬೇರೆಬೇರೆ ಕ್ರಮಗಳತ್ತ ಚಿಂತಿಸಲಾಗುತ್ತಿದೆ. ನಾವು ಹೂಡಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇವೆಯೇ ವಿನಾ ನೆರೆಹೊರೆಯ ರಾಜ್ಯಗಳ ಜತೆಯಲ್ಲ. ಭೂಮಿಯ ಬೆಲೆ ಹೆಚ್ಚಾಗಲು ಇದೂ ಒಂದು ಕಾರಣವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕ್ವಿನ್ ಸಿಟಿ: 10 ಒಪ್ಪಂದಕ್ಕೆ ಸಹಿ

ಮಹತ್ವಾಕಾಂಕ್ಷೆಯ ಕ್ವಿನ್ ಸಿಟಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟು 10 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಇದರಲ್ಲಿ ಅಮೆರಿಕಾದ ನ್ಯೂಯಾರ್ಕ್ ನ ಸೇಂಟ್ ಜಾನ್ಸ್ ಯೂನಿವರ್ಸಿಟಿ ಹಾಗೂ ಯೂನಿವರ್ಸಿಟಿ ಆಫ್ ಲಿವರ್ ಪೂಲ್ ಜತೆಗೂ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಅವರು ವಿವರಿಸಿದರು.

ವಿಜಯಪುರ ಜಿಲ್ಲೆಗೆ 42 ಸಾವಿರ ಕೋಟಿ

ವಿಜಯಪುರ ಜಿಲ್ಲೆಯಲ್ಲಿ 42 ಸಾವಿರ ಕೋಟಿ ಹೂಡಿಕೆಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇನ್ನೂ ಕೆಲವು ಒಪ್ಪಂದ ಆಗುವುದರಲ್ಲಿ ಇದ್ದು, ಉತ್ತರ ಕರ್ನಾಟಕಕ್ಕೆ ಒಳ್ಳೆಯ ಅವಕಾಶಗಳು ಮುಂದಿನ ದಿನಗಳಲ್ಲಿ ಸಿಗಲಿವೆ ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT