ಬೆಳಗಾವಿಯಲ್ಲಿ ಆಟೋ ಚಾಲಕನೊಬ್ಬ ಕ್ಷುಲ್ಲಕ ಕಾರಣಕ್ಕೆ ಗೋವಾ ಮಾಜಿ ಶಾಸಕರನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ಶನಿವಾರ ನಡೆದಿದೆ. ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೋ ಮಾಮಲೇದಾರ್ ಅವರು ಇಂದು ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ಬೆಳಗಾವಿಯ ಖಡೇಬಜಾರ್ ಬಳಿ ಆಟೋಗೆ ಮಾಜಿ ಶಾಸಕರ ಕಾರು ಟಚ್ ಆಗಿದೆ. ರಸ್ತೆಯಲ್ಲಿ ಎಷ್ಟೇ ಕೂಗಿದರೂ ಕೇರ್ ಮಾಡದೇ ಹೊರಟ ಮಾಜಿ ಶಾಸಕ ಲಾವೋ ಮಾಮಲೇದಾರ್ ಕಾರನ್ನು ಆಟೋ ಚಾಲಕ ಹಿಂಬಾಲಿಕೊಂಡು ಹೋಗಿದ್ದಾನೆ. ಬಳಿಕ ಲಾವೋ ಮಾಮಲೇದಾರ್ ಅವರು ಶ್ರೀನಿವಾಸ ಲಾಡ್ಜ್ ಬಳಿ ಬಂದು ನಿಂತಿದ್ದಾಗ ಆಟೋ ಚಾಲಕ ಜಗಳ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಆಟೋ ಚಾಲಕ, ಲಾವೋ ಮಾಮಲೇದಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ ಮಾಜಿ ಶಾಸಕ ತಾವು ತಂಗಿದ್ದ ಲಾಡ್ಜ್ ಗೆ ಹೋಗುವಾಗ ಮೆಟ್ಟಿಲು ಏರಲು ಆಗದೇ ಕುಸಿದು ಬಿದ್ದು ಮೃತಟ್ಟಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿ ಮುಜಾಹಿದ್ ಶಕೀಲ್ ಸನದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್‌ಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಘೋಷಿಸಿದ ಹಣವನ್ನು ಬಿಡುಗಡೆ ಮಾಡದೆ ಕರ್ನಾಟಕಕ್ಕೆ ದ್ರೋಹ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸುಳ್ಳು ಹರಡುತ್ತಿದೆ ಎಂದು ಆರೋಪಿಸಿದರು. ಜೆಜೆಎಂ ಅಡಿಯಲ್ಲಿ ಕರ್ನಾಟಕಕ್ಕೆ 28,623 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ ರಾಜ್ಯವು 11,760 ಕೋಟಿ ರೂ. ಮಾತ್ರ ಖರ್ಚು ಮಾಡಿದೆ ಎಂದು ಸೋಮಣ್ಣ ಲೋಕಸಭೆಗೆ ತಿಳಿಸಿದ್ದಾರೆ ಎಂದು ವರದಿಯಾಗಿತ್ತು. ಜೆಜೆಎಂಗೆ ಒಟ್ಟು ಹಂಚಿಕೆ 49,262 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು 26,119 ಕೋಟಿ ರೂ.ಗಳಾಗಿದ್ದು, ರಾಜ್ಯದ ಪಾಲು 23,142 ಕೋಟಿ ರೂ. ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪಂಜಾಬ್ನ ಪಟಿಯಾಲ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಪಟಿಯಾಲದ ಆಸ್ಪತ್ರೆಯೊಂದರಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಕುರುಬೂರ್ ಶಾಂತಕುಮಾರ್ ಅವರನ್ನು ಪಟಿಯಾಲ ಆಸ್ಪತ್ರೆಯಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವ್ಯವಸ್ಥೆ ಮಾಡಿದ್ದಾರೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್, ಮೆಟ್ರೋ ರೈಲು ಮತ್ತು ಉಪ ನಗರ ರೈಲು ಜೊತೆಗೆ ಭಾರತೀಯ ರೈಲ್ವೆಯಿಂದಲೂ ರೈಲ್ವೆ ಸಂಪರ್ಕ ಒದಗಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೂ ಮುನ್ನಾ ಕೆಲವೊಂದು ತಾಂತ್ರಿಕ ಸವಾಲುಗಳಿದ್ದು,. ಅವುಗಳನ್ನು ಬಗೆಹರಿಸುವತ್ತ ರೈಲ್ವೆ ತಂಡ ಕಾರ್ಯೋನ್ಮುಖವಾಗಿದೆ ಎಂದರು. ಇವುಗಳ ಜೊತೆಗೆ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ರೈಲು ಸಂಪರ್ಕವನ್ನು ಒದಗಿಸಲಾಗುವುದು ಎಂದರು. ಉಪ ನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ರೈಲ್ವೆ ತಾಂತ್ರಿಕ ಕೇಡರ್ ನಿಂದ ಪೂರ್ಣ ಅವಧಿಯ ವ್ಯವಸ್ಥಾಪಕ ನಿರ್ದೇಶಕರು (MD)ನೇಮಕ ಮಾಡಬೇಕು. ಇದು ಆಗದೇ ಕಾಮಗಾರಿಯಲ್ಲಿ ಪ್ರಗತಿ ಕುಂಠಿತವಾಗಲಿದೆ ಎಂದು ಹೇಳಿದರು.
ಬೀದರ್ ಎಟಿಎಂ ದರೋಡೆ ಹಾಗೂ ಸಿಬ್ಬಂದಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಫೋಟೋ ಬಿಡುಗಡೆ ಮಾಡಲಾಗಿದ್ದು, ದರೋಡೆಕೋರರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಫತೆಪುರ್ ಫುಲ್ವರಿಯಾ ನಗರದ ನಿವಾಸಿ ಅಮನ್ ಕುಮಾರ್ ಹಾಗೂ ಮಹಿಶೋರ್ ನಗರದ ನಿವಾಸಿ ಅಲೋಕ್ ಕುಮಾರ್ ಅಲಿಯಾಸ್ ಅಶುತೋಷ್ ಆರೋಪಿಗಳು ಎಂದು ತಿಳಿದು ಬಂದಿದೆ. ಕಳೆದ ಜನವರಿ 16ರಂದು ಹಾಡಹಗಲೇ ಎಟಿಎಂ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಸುಮಾರು 93 ಲಕ್ಷ ರೂಪಾಯಿ ಹಣದ ಸಮೇತ ಈ ಇಬ್ಬರು ಪರಾರಿಯಾಗಿದ್ದಾರೆ.